
ಮಂಡ್ಯ: ನಾನು ಬರ್ತೀನಿ ಎಂದು ಮೃತ ರೈತನ ಮನೆಗೆ ಭೇಟಿ ಕೊಟ್ರಲ್ಲ. ಸಚಿವ ನಾರಾಯಣಗೌಡ ಭೇಟಿ ನೀಡಿದ್ದು ಸಂತೋಷದ ವಿಚಾರ. ನಾನು ಬಂದಿಲ್ಲ ಅಂದಿದ್ರೆ ಸಚಿವರೂ ಬರುತ್ತಿರಲಿಲ್ಲವೇನೋ ಎಂದು ಮೃತ ರೈತನ ಮನೆಗೆ ಸಚಿವರು ಬಂದು ಹೋದ ವಿಚಾರವಾಗಿ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸಾವಿನ ಮನೆಯಲ್ಲಿ ಸಾಂತ್ವನದ ರಾಜಕೀಯ?
ಈ ನಡುವೆ, K.R.ಪೇಟೆ ಕ್ಷೇತ್ರದಲ್ಲಿ ಸಾವಿನ ಮನೆಯಲ್ಲಿ ಸಾಂತ್ವನದ ರಾಜಕೀಯ ನಡೆದಿದೆ ಎಂದು ಸ್ಥಳೀಯರು ಮಾತನಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಚೌಡೇನಹಳ್ಳಿಯ ರೈತ ನಂಜೇಗೌಡ(60) ಸಾಲಬಾಧೆ ಹಿನ್ನೆಲೆಯಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಗಾಗಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಲು ನಿರ್ಧರಿಸಿದ್ದರು. ನಿನ್ನೆಯೇ ನಿಗದಿಯಾಗಿದ್ದ ಕಾರ್ಯಕ್ರಮದಂತೆ ನಿಖಿಲ್ ಇಂದು ಭೇಟಿಗೆ ಮುಂದಾಗಿದ್ದರು.
ಆದರೆ, ನಿಖಿಲ್ ಭೇಟಿಗೂ ಮುನ್ನ ಮೃತ ರೈತನ ಮನೆಗೆ ಇಂದು ಸಚಿವ ಕೆ.ಸಿ.ನಾರಾಯಣಗೌಡ ಭೇಟಿ ನೀಡಿದರು. ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಸಾವಿರ ರೂಪಾಯಿ ವೈಯಕ್ತಿಕ ನೆರವು ಸಹ ನೀಡಿದರು. ಹೀಗಾಗಿ, ರೈತ ಸತ್ತಾಗ ಬಾರದ ರಾಜಕೀಯ ನಾಯಕರು ಸಾಂತ್ವನ ಹೇಳಲು ನಾ ಮುಂದು ತಾ ಮುಂದು ಎಂದು ಬಂದಿರುವುದು ನಿಜಕ್ಕೂ ವಿಪರ್ಯಾಸ ಎಂದು ಸ್ಥಳೀಯರು ಮಾತನಾಡಿಕೊಂಡಿದ್ದಾರೆ.