ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, APMC ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸಿ, ಜೈಲ್ ಭರೋ ಚಳವಳಿಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಸಹ ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ಕೇವಲ ನಮ್ಮ ರಾಜ್ಯದಲ್ಲಷ್ಟೇ ಜಾರಿಯಾದರೆ ಉಪಯೋಗವಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತಹ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
‘ಬಿಜೆಪಿ ನಾಯಕರು ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ’
ಬಿಜೆಪಿ ನಾಯಕರು ಗೋವನ್ನು ತಾಯಿಯಂತೆ ಕಾಣುವುದೇ ಆದರೆ ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ. ಭಾರತದಲ್ಲಿ ತಿಂದರಷ್ಟೇ ಗೋವು ಮಾತೆಯೇ? ವಿದೇಶಗಳಿಗೆ ರಫ್ತಾಗುತ್ತಿರುವ ಗೋವುಗಳು ಮಾತೆಯಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿದೇಶಗಳಿಂದ ಗೋಮಾಂಸವನ್ನು ಆಮದು ಮಾಡುವವರು @BJP4Karnataka ಅವರು, ವಿದೇಶಗಳಿಗೆ ರಫ್ತು ಮಾಡುತ್ತಿರುವವರು ಬಿಜೆಪಿಯವರು. ಆದರೆ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಮಾತ್ರ ಗೋಹತ್ಯೆ ಮಾಡುವವರು ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಒಂದಕ್ಕೆ 110 ಡಾಲರ್ ಇದ್ದಾಗ ಪೆಟ್ರೋಲನ್ನು 60-65 ರೂಪಾಯಿಗೆ ಸರ್ಕಾರ ಮಾರಾಟ ಮಾಡಿತ್ತು. ಪ್ರಸ್ತುತ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 42 ಡಾಲರ್ ಇದೆ, ಅಂದರೆ ಈಗ ಮಾರುತ್ತಿರುವ ಅರ್ಧಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ಮಾರಾಟ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತವಿರೋಧಿ, ಜನವಿರೋಧಿ ಕಾಯಿದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ‘ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು’ ಎಂಬ ಕಿರು ಹೊತ್ತಿಗೆಯನ್ನು ಇಂದು ಬಿಡುಗಡೆಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
‘ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ’
ಸರ್ಕಾರ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಭೂಮಿ ಖರೀದಿಸುವ ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ. ಇದನ್ನು ನಿರ್ಬಂಧಿಸುವ ಯಾವ ನಿಯಮಗಳು ತಿದ್ದುಪಡಿಯಲ್ಲಿ ಇಲ್ಲ ಎಂದು ಹೇಳಿದರು.
ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ನಂತರ ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಬೇಕಾದ ನಿಯಮವಿರುವುದಿಲ್ಲ, ಯಾರಿಗೆ ಬೇಕಾದರೂ ಮಾರಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಹೆಚ್ಚು ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ರೈತರು ಖಾಸಗಿಯವರಿಗೆ ಬೆಳೆಗಳನ್ನು ಮಾರುವುದರಿಂದ ಕಾಲಕ್ರಮೇಣ ಎಪಿಎಂಸಿ ಗಳ ವಹಿವಾಟು ಸ್ಥಗಿತಗೊಂಡು, ಅವು ಮುಚ್ಚಲ್ಪಡುತ್ತವೆ. ಮುಂದೆ ರೈತರು ಬೆಳೆ ಮಾರಾಟಕ್ಕಾಗಿ ಖಾಸಗಿಯವರನ್ನೇ ಸಂಪೂರ್ಣ ಅವಲಂಬಿಸಬೇಕಾಗುತ್ತದೆ ಎಂದು ಸಹ ಹೇಳಿದರು.
ಆರಂಭದ ದಿನಗಳಲ್ಲಿ ರೈತರಿಗೆ ಲಾಭದಾಯಕವಾದರೂ ನಂತರದ ದಿನಗಳಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವ ಖಾತ್ರಿಯಿಲ್ಲ. ಒಮ್ಮೆ ಖಾಸಗಿ ಸಂಸ್ಥೆಗಳು ಮಾರುಕಟ್ಟೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ ಅವರು ಕೇಳಿದ ಬೆಲೆಗೆ ರೈತರು ತಮ್ಮ ಬೆಳೆಗಳನ್ನು ಮಾರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಿಜೆಪಿ ನಾಯಕರು ಗೋವನ್ನು ತಾಯಿಯಂತೆ ಕಾಣುವುದೇ ಆದರೆ ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ. ಭಾರತದಲ್ಲಿ ತಿಂದರಷ್ಟೇ ಗೋವು ಮಾತೆಯೇ? ವಿದೇಶಗಳಿಗೆ ರಫ್ತಾಗುತ್ತಿರುವ ಗೋವುಗಳು ಮಾತೆಯಲ್ಲವೇ? 13/15#LiarBJP pic.twitter.com/2gKkbciOA8
— Siddaramaiah (@siddaramaiah) January 10, 2021
‘ಮಾಂಸ ತಿಂದ್ರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?.. ನನ್ನ ವಿರುದ್ಧ ಏನು ವ್ಯಾಖ್ಯಾನಗಳು !’