ಉಡುಪಿ: ಕೃಷ್ಣಮಠದ ಭಕ್ತರಲ್ಲಿ ಆತಂಕ ಮನೆಮಾಡಿದೆ. ಯಾಕಂದ್ರೆ, ವಿಶ್ವಸಂತ, ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಭಕ್ತಗಣದಲ್ಲಿ ಆತಂಕ ಮನೆ ಮಾಡಿದೆ.
ಕೃಷ್ಣಮಠದ ತುಂಬೆಲ್ಲ ಆತಂಕ. ಕೋಟ್ಯಂತರ ಭಕ್ತರಲ್ಲಿ ತಳಮಳ. ಆಸ್ಪತ್ರೆಯತ್ತ ದೌಡಾಯಿಸ್ತಿರೋ ರಾಜಕಾರಣಿಗಳು, ಎದೆಬಡಿತ ಹೆಚ್ಚಿಸುತ್ತಿರೋ ವೈದ್ಯರ ಮಾತು. ಉಸಿರಾಟದ ತೊಂದರೆಯಿಂದ ಬಳಲುತ್ತಿರೋ ಪೇಜಾವರ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ನಾಡಿನಾದ್ಯಂತ ಅತಂಕ ಮನೆಮಾಡಿದೆ. ವಿಶ್ವಸಂತ, ಮಹಾಗುರು, ಕೃಷ್ಣಮಠದ ಕೀರ್ತಿ ಕಳಶವಾಗಿರೋ ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥನೆ, ಪೂಜೆ ಮೊಳಗಿದೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ ಒಂಬತ್ತು ದಿನಗಳಿಂದ, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ವೆಂಟಿಲೇಟರ್ ಮೂಲಕ ಉಸಿರಾಡ್ತಿರುವ 88 ವರ್ಷದ ಶ್ರೀಗಳ ಆರೋಗ್ಯ, ಕಳೆದೆರಡು ದಿನದಿಂದ ಮತ್ತಷ್ಟು ಬಿಗಡಾಯಿಸಿದೆ. ಉಸಿರಾಟ ಮತ್ತು ನ್ಯೂಮೋನಿಯಾ ಸಮಸ್ಯೆಯಿಂದಾಗಿ ಶ್ರೀಗಳು ಗಂಭೀರ ಸ್ಥಿತಿ ತಲುಪಿದ್ದು, ಕೃಷ್ಣಮಠದ ಹಿರಿಯ ಜೀವವನ್ನ ಉಳಿಸಿಕೊಳ್ಳೋಕೆ ವೈದ್ಯರು ಹರಸಾಹಸ ಮಾಡ್ತಿದ್ದಾರೆ.
ಕೃಷ್ಣಮಠದಲ್ಲಿ ಐದು ಪರ್ಯಾಯ ಪೂರೈಸಿರೋ ಶ್ರೀಗಳ ಆರೋಗ್ಯ ಸ್ಥಿತಿ ಎಲ್ಲರಿಗೂ ಆತಂಕ ಸೃಷ್ಟಿಸಿದೆ. ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲೂ ಶ್ರೀಗಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವಿಷ್ಯ ಹೊರಬೀಳ್ತಿದ್ದಂತೆ, ಆಸ್ಪತ್ರೆಯತ್ತ ಅನೇಕ ಗಣ್ಯರು ದೌಡಾಯಿಸಿದ್ರು. ಸಂಸದೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಮಠಗಳ ಪೀಠಾಧಿಪತಿಗಳು ಕೂಡ ಶ್ರೀಗಳ ಆರೋಗ್ಯ ವಿಚಾರಿಸಲು ಆಗಮಿಸಿದ್ರು. ಇನ್ನು ಶ್ರೀಗಳು ಚಿಂತಾಜನಕ ಸ್ಥಿತಿ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ತಿಳಿಸಿದ್ರು. ಹಾಗೇ, ಕೆಎಂಸಿ ಆಸ್ಪತ್ರೆಗೆ ಆಗಮಿಸಿ ಶ್ರೀಗಳ ಆರೋಗ್ಯದ ಮಾಹಿತಿ ಪಡೆದ್ರು.
ಸಿಎಂ ಕಾರ್ಯಕ್ರಮ ರದ್ದು.. ಉಡುಪಿಯಲ್ಲೇ ಬಿಎಸ್ವೈ ವಾಸ್ತವ್ಯ..!
ಇನ್ನು ಶ್ರೀಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಿಎಂ ಯಡಿಯೂರಪ್ಪ ಉಡುಪಿಯಲ್ಲೇ ಉಳಿದಕೊಳ್ಳಲಿದ್ದಾರೆ. ಹಾಗೇ, ಶ್ರೀಗಳ ಆರೋಗ್ಯದ ಕುರಿತು ಕ್ಷಣಕ್ಷಣದ ಮಾಹಿತಿ ಪಡೆಯಲಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳು ನಾಳಿನ ಕಾರ್ಯಕ್ರಮಗಳೆಲ್ಲವನ್ನೂ ರದ್ದು ಮಾಡಿದ್ದಾರೆ.
ಶ್ರೀಗಳನ್ನ ಮಠಕ್ಕೆ ಸ್ಥಳಾಂತರಿಸಲು ಚಿಂತನೆ!
ಹೌದು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸದ ಹಿನ್ನೆಲೆಯಲ್ಲಿ, ಶ್ರೀಗಳನ್ನ ಮಠಕ್ಕೆ ಸ್ಥಳಾಂತರ ಮಾಡುವುದಾಗಿ ಪೇಜಾವರ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪೇಜಾವರ ಮಠದ 32ನೇ ಪೀಠಾಧಿಪತಿಯಾಗಿರೋ ವಿಶ್ವೇಶ ತೀರ್ಥರ ಆರೋಗ್ಯ ಸ್ಥಿತಿ ಭಕ್ತರಲ್ಲೂ ತಳಮಳ ಮೂಡಿಸಿತು. ಮಣಿಪಾಲದ ಆಸ್ಪತ್ರೆಯತ್ತ ನೂರಾರು ಭಕ್ತರು ಆಗಮಿಸಿದ್ರು. ಆದ್ರೆ, ಚಿಕಿತ್ಸೆಗೆ ತೊಂದರೆ ಆಗಲಿದೆ ಅಂತ ವೈದ್ಯರು ಭಕ್ತರು ಹಾಗೂ ಕೆಲ ನಾಯಕರನ್ನ ಆಸ್ಪತ್ರೆಗೆ ಬಿಡಲಿಲ್ಲ. ಒಟ್ನಲ್ಲಿ ಏಳು ವರ್ಷಕ್ಕೆ ಮಠದ ಉತ್ತರಾಧಿಕಾರಿಯಾದ ಪೇಜಾವರ ಶ್ರೀ, ವಿಶ್ವಗುರುವಾಗಿ ಬೆಳೆದು ನಿಂತವರು.. ದೇಶಾದ್ಯಂತ ಸಾವಿರಾರು ಶಿಷ್ಯರನ್ನ ಹೊಂದಿರುವ ಶ್ರೀಗಳ ಆರೋಗ್ಯ ಸ್ಥಿತಿ ಆತಂಕ ಮೂಡಿಸಿದ್ದು, ಪೇಜಾವರ ಶ್ರೀ ಚೇತರಿಕೆಗಾಗಿ ಎಲ್ಲೆಡೆ ಪ್ರಾರ್ಥನೆ ನಡೆಯುತ್ತಿದೆ.