ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿವಿ 25ನೇ ಸಂಸ್ಥಾಪನಾ ದಿನಾಚರಣೆ ಮತ್ತು ರಜತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೆಹಲಿಯಿಂದ ಆನ್ಲೈನ್ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಜಯನಗರದಲ್ಲಿರುವ ರಾಜೀವ್ ಗಾಂಧಿ ವಿವಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಯಡಿಯೂರಪ್ಪ, ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಕೊರೊನಾ ಕಣ್ಣಿಗೆ ಕಾಣದ ಶತ್ರು:
ಕೊರೊನಾ ವೈರಸ್ ಕಣ್ಣಿಗೆ ಕಾಣದ ಶತ್ರುವಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ ನಿಜವಾದ ಸೈನಿಕರು. ಇವರು ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಯಾವುದೇ ಕಾರಣಕ್ಕೂ ಕೊವಿಡ್ ವಾರಿಯರ್ಸ್ ಮೇಲೆ ಹಲ್ಲೆಯನ್ನ ಸಹಿಸುವುದಿಲ್ಲ. ಈಗ ದೊಡ್ಡದಾಗಿ ಯೋಚಿಸುವ, ಒಳ್ಳೆಯದು ಮಾಡುವ ಸಮಯವಾಗಿದೆ. ಮಾನವೀಯತೆ, ಅಭಿವೃದ್ಧಿಯ ಕಡೆ ನಾವು ಗಮನ ಹರಿಸಬೇಕು ಎಂದು ಉದ್ಘಾಟನೆ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
2025ರ ವೇಳೆಗೆ ಭಾರತ ಟಿಬಿ ರೋಗ ಮುಕ್ತ:
2025ರ ವೇಳೆಗೆ ಭಾರತವನ್ನ ಟಿಬಿ ರೋಗ ಮುಕ್ತ ಮಾಡುತ್ತೇವೆ. ಕೊರೊನಾ ವಾರಿಯರ್ಸ್‌ಗೆ 1 ಕೋಟಿ ಪಿಪಿಇ ಕಿಟ್ ನೀಡಿದ್ದೇವೆ. ಭಾರತದಲ್ಲಿ 1.2 ಕೋಟಿ N-95 ಮಾಸ್ಕ್ ಉತ್ಪಾದಿಸಲಾಗಿದೆ. ನಾವು ಟೆಲಿ ಮೆಡಿಸಿನ್ ಬಗ್ಗೆ ಯೋಚಿಸಬೇಕಿದೆ. ಕಳೆದ 6 ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಲು ಪ್ರಯತ್ನ. ಕಳೆದ 5 ವರ್ಷದಲ್ಲಿ 30 ಸಾವಿರ ಎಂಬಿಬಿಎಸ್ ಸೀಟ್‌ಗಳು, 15 ಸಾವಿರ ಸ್ನಾತಕೋತ್ತರ ಪದವಿಯ ಸೀಟ್ ಸೃಷ್ಟಿಸಲಾಗಿದೆ.
Published On - 12:33 pm, Mon, 1 June 20