ಗೃಹ ಸಚಿವ ಪರಮೇಶ್ವರ್​ಗೆ ಮನವಿ ಸಲ್ಲಿಸಲು ಬಂದ ಯುವಕನ ಮೇಲೆ ಪೊಲೀಸ್ ಶಕ್ತಿ ಪ್ರದರ್ಶನ!

|

Updated on: Jul 12, 2024 | 11:31 AM

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ, ಈ ಯುವಕ ಧರಣಿಯೇನೂ ನಡೆಸುತ್ತಿಲ್ಲ, ಮನವಿ ಪತ್ರ ಸಲ್ಲಿಸಲು ಮಾತ್ರ ಬಂದಿದ್ದೇನೆ ಅನ್ನುತ್ತಾನೆ. ಅಮಾಯಕ ಯುವಕನ ಮೇಲೆ ಪೊಲೀಸರು ಶಕ್ತಿ ಪ್ರದರ್ಶನ ನಡೆಸುವ ಅವಶ್ಯಕತೆ ಇತ್ತೇ? ಇದೆಲ್ಲ ಗೃಹ ಸಚಿವರ ಆದೇಶದ ಮೇರೆಗೆ ನಡೆಯಿತೇ? ಜಿ ಪರಮೇಶ್ವರ್ ಕನ್ನಡಿಗರಿಗೆ ಉತ್ತರಿಸಬೇಕು.

ಬೆಂಗಳೂರು: ಪೊಲೀಸ್ ಇನ್ಸ್​ಪೆಕ್ಟರ್ ಆದ ನಂತರ ಕರ್ತವ್ಯ ಹೇಗೆ ನಿರ್ವಹಿಸಬೇಕೆಂದು ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ನಿವಾಸದ ಮುಂದೆ ಪೊಲೀಸರ ಗುಂಪು ಡೆಮೋ ಮಾಡುತ್ತಿದೆಯೇ? ವಿಷಯವೇನೆಂದರೆ, 545 ಪಿಎಸ್ಐಗಳ ನೇಮಕಾತಿ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಎರಡನೇ ಬಾರಿ ಲಿಖಿತ ಪರೀಕ್ಷೆ ಬರೆದಿರುವ ಬೇರೆ ಬೇರೆ ಊರುಗಳ ಯುವಕರು ಮನವಿ ಪತ್ರ ಸಲ್ಲಿಸಲು ಪರಮೇಶ್ವರ್ ನಿವಾಸದ ಬಳಿ ಬಂದಿದ್ದಾರೆ. ಶಾಂತಿಯುತವಾಗಿಯೇ ಮನವಿ ಪತ್ರ ಸಲ್ಲಿಸಬಯಸಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ಒಬ್ಬ ಯುವಕ ಪೊಲೀಸರು ಎಷ್ಟೇ ಬಲವಂತ ಮಾಡಿದರೂ, ಶಕ್ತಿ ಪ್ರದರ್ಶಿಸಿದರೂ ಪೊಲೀಸ್ ವ್ಯಾನ್ ಹತ್ತಲು ತಯಾರಿಲ್ಲ. ನಾನು ಏನು ತಪ್ಪು ಮಾಡಿದ್ದೇನೆ? ಕೇವಲ ಮನವಿ ಪತ್ರ ಸಲ್ಲಿಸಲು ಬಂದಿರುವ ನನ್ನನ್ನು ಯಾಕೆ ಅರೆಸ್ಟ್ ಮಾಡ್ತಾ ಇದ್ದೀರಿ? ನನ್ನ ಕಾಲಿಗೆ ಪೆಟ್ಟಾಗಿದೆ ದಯವಿಟ್ಟು ತೊಂದರೆ ಕೊಡಬೇಡಿ ಅಂತ ಯುವಕ ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ತಮ್ಮ ಶಕ್ತಿ ಬಳಸಿ ಅವನನ್ನು ಜೀಪಿನಲ್ಲಿ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಳ್ಳಾಟ ನೂಕಾಟದಲ್ಲಿ ಯುವಕನ ಕನ್ನಡಕ ನೆಲಕ್ಕೆ ಬೀಳುತ್ತದೆ. ಪೊಲೀಸರ ತುಳಿದಾಟದಿಂದ ಅದು ಒಡೆದಿರಲೂಬಹುದು. ಯುವಕ ಗೌರವದಿಂದ ಸರ್ ಸರ್ ಅಂತ ಮಾತಾಡಿದರೆ ಪೊಲೀಸರು ಹತ್ತೋ ಹೋಗೋ ಅಂತೆಲ್ಲ ಏಕವಚನದಲ್ಲಿ ಬಯ್ಯುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಿರುದ್ಯೋಗಿ ಯುವಕರಿಗೆ ಸಹಿಸುದ್ದಿ ನೀಡಿದ ಗೃಹ ಸಚಿವ ಪರಮೇಶ್ವರ್, ಇನ್ನೂ ಸುಮಾರು 1,000 ಪಿಎಸ್ಐಗಳ ನೇಮಕಾತಿ!