ನವದೆಹಲಿ: ಕೋವಿಡ್ ಮೂರನೇ ಅಲೆಯಲ್ಲಿ (third wave) ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆಯಾದರೂ ಕೆಲವು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ದೆಹಲಿ (Delhi ) ಮತ್ತು ಮುಂಬೈ (Mumbai) ಮಹಾನಗರಗಳಲ್ಲಿ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ಪ್ರಮಾಣ (positivity rate) ತಗ್ಗುತ್ತಿದೆ. ಅಲ್ಲದೆ, ಸೋಂಕಿತರನ್ನು ಅಸ್ಪತ್ರೆಗೆ ಸೇರಿಸುವ ಪರಿಸ್ಥಿತಿಯೂ ಎರಡನೇ ಅಲೆಯಲ್ಲಿದ್ದಂತೆ ಸೃಷ್ಟಿಯಾಗುತ್ತಿಲ್ಲ. ದೆಹಲಿಯಲ್ಲಿ ಶನಿವಾರ 11,486 ಸೋಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರದ ಸಂಖ್ಯೆಗೆ (10,756) ಹೋಲಿಸಿದರೆ ಇದು ಶೇಕಡಾ 7 ರಷ್ಟು ಹೆಚ್ಚಿದೆಯಾದರೂ ಟೆಸ್ಟ್ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಶುಕ್ರವಾರದಂದು 59,629 ಜನರ ಟೆಸ್ಟ್ ನಡೆದರೆ ಶನಿವಾರ 70,226 ಜನರ ಕೋವಿಡ್ ಟೆಸ್ಟ್ ಗೊಳಗಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಪಾಸಿಟಿವಿಟಿ ದರ ಹೆಚ್ಚುಕಡಿಮೆ ಅರ್ಧದಷ್ಟು ಕಡಿಮೆಯಾಗಿರುವುದು ಉತ್ತೇಜನಕಾರಿ ಸಂಗತಿ. ಜನೆವರಿ 15ರಂದು ಶೇಕಡಾ 30.64 ಇದ್ದ ಪಾಸಿಟಿವಿಟಿ ರೇಟ್ ಶನಿವಾರ ಶೇ. 16.36 ಕ್ಕೆ ಇಳಿದಿದೆ. ಆದರೆ ಶನಿವಾರ ದೆಹಲಿಯಲ್ಲಿ ಪಿಡುಗಿಗೆ 45 ಜನ ಬಲಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕಳೆದ 7 ತಿಂಗಳಲ್ಲಿ ಇದೇ ಅತಿ ಹೆಚ್ಚು ಸಾವುಗಳ ಸಂಖ್ಯೆಯಾಗಿದೆ. ಕಳೆದ ಜೂನ್ 5 ರಂದು 68 ಜನ ಮಹಾಮಾರಿಗೆ ಬಲಿಯಾಗಿದ್ದರು.
ಶನಿವಾರದ ಸೋಂಕಿನ ಪ್ರಕರಣಗಳ ಸೇರಿಸಿದರೆ, ದೆಹಲಿಯಲ್ಲಿ ಇದುವರೆಗೆ ಸೋಂಕು ತಾಕಿಸಿಕೊಂಡವರ ಸಂಖ್ಯೆ 17,82,514 ಕ್ಕೆ ಏರಿದೆ. ಹಾಗೆಯೇ ಇಂದು ಬಲಿಯಾದವರು ಸೇರಿ ಮೃತರ ಸಂಖ್ಯೆ 25,586ಕ್ಕೆ ಏರಿದೆ.
ಸೋಂಕಿನ ಪ್ರಮಾಣ ಮತ್ತು ಪಾಸಿಟಿವಿಟಿ ದರ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ವೀಕೆಂಡ್ ಕರ್ಫ್ಯೂ ತೆರವುಗೊಳಿಸುವ ಕುರಿತು ಕಳಿಸಿದ ಪ್ರಸ್ತಾಪವೊಂದನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ತಳ್ಳಿಹಾಕಿದ್ದಾರೆ. ವೀಕೆಂಡ್ ಕರ್ಫ್ಯೂ ಅಲ್ಲದೆ ದೆಹಲಿ ಅಂಗಡಿ ಮುಗ್ಗಟ್ಟುಗಳು ಸಮ-ಬೆಸ ಸಂಖ್ಯೆ ಆಧಾರದಲ್ಲಿ ತೆರೆದಿರುತ್ತವೆ.
ಕೋವಿಡ್ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆ ಅಗುವವರೆಗೆ ಸದ್ಯದ ವ್ಯವಸ್ಥೆಯೇ ಮುಂದುದವರಿಯಲಿ ಎಂದು ಬೈಜ್ವಾಲ್ ಹೇಳಿದ್ದಾರೆ. ಆದರೆ ದೆಹಲಿ ಖಾಸಗಿ ಕಚೇರಿಗಳಲ್ಲಿ ಶೇ. 50 ರಷ್ಟು ಹಾಜರಾತಿಗೆ ಅನುಮತಿ ನೀಡುವ ಸರ್ಕಾರದ ಪ್ರಸ್ತಾಪಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ.
ಜನೆವರಿ 14ರವೆರೆಗೆ ದೆಹಲಿಯಲ್ಲಿ ದಿನಕ್ಕೆ 30,000 ದಷ್ಟು ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಅಲ್ಲಿಂದೀಚೆಗೆ ಪ್ರತಿದಿನ 12,000 ಕ್ಕಿಂತ ಕಡಿಮೆ ಕೇಸ್ಗಳು ಪತ್ತೆಯಾಗುತ್ತಿವೆ.
ದೆಹಲಿ ಸರ್ಕಾರದ ಅರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೆಹಲಿ ಮಹಾನಗರದಲ್ಲಿ 58,593 ಸಕ್ರಿಯ ಪ್ರಕರರಣಗಳಿವೆಯಾದರೂ ಅವುಗಳ ಪೈಕಿ 48,356 ಪ್ರಕರಣಗಳು ಹೋಮ್ ಐಸೊಲೇಶನ್ನಲಿವೆ. ಹಾಗಾಗಿ ವ್ಯದ್ಯಕೀಯ ವ್ಯವಸ್ಥೆ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಬೀಳುತ್ತಿಲ್ಲ.
ಇದನ್ನೂ ಓದಿ: ಕೋವಿಡ್ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್ ಮನೆ ಬಿಡಲೇಬೇಕು!