AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ ತೋರಿಸಲಾಗದೇ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕುಹಕ

ಮುಖ್ಯಮಂತ್ರಿಗಳು ಹಣ ಇಲ್ಲ ಎನ್ನುತ್ತಾರೆ. ಹಣ ಇಲ್ಲ ಅಂದಮೇಲೆ ಮುಖ್ಯಮಂತ್ರಿಗಳು ಯಾಕಿದೀರಪ್ಪ? ಎಂದು ಹರಿತವಾಗಿ ವ್ಯಂಗ್ಯವಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಬರುತ್ತೇವೆ ಎಂದು ಹೇಳುತ್ತಲೇ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.

ಮುಖ ತೋರಿಸಲಾಗದೇ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕುಹಕ
ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ
guruganesh bhat
|

Updated on:Feb 21, 2021 | 3:35 PM

Share

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೊದಲಿನ ಮುಖ‌ ತೋರಿಸಬಾರದೆಂದು ಗಡ್ಡ ಬೆಳೆಸಿದ್ದಾರೆ. ಅಚ್ಛೇ ದಿನ್​ ಆಯೇಗಾ ಎಂದು ನಂಬಿಸಿ ಅಧಿಕಾರಕ್ಕೆ ಬಂದು ಜನರಿಗೆ ಟೋಪಿ ಹಾಕಿಬಿಟ್ಟರು ಎಂದು ಬೆಂಗಳೂರಲ್ಲಿ ನಡೆದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜಿಡಿಪಿ ಕುಸಿದಿದೆ. ಮುಂದಿನ ವರ್ಷವೂ ಜಿಡಿಪಿ ಕುಸಿಯಲಿದೆ ಎಂದ ಅವರು, ನಿರ್ಮಲಾ ಸೀತಾರಾಮನ್ ಎಂಬ ಹೆಣ್ಣು ಮಗಳ ಬಳಿಯೂ ಬಿಜೆಪಿ ನಾಯಕರು ಸುಳ್ಳು‌ ಹೇಳಿಸುತ್ತಿದ್ದಾರೆ. ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿ ಈಗ ಎದುರಾಗಿದೆ. ಈ ವರ್ಷವೂ ₹ 80 ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ.ಇದೇನಾ ನಿಮ್ಮ ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹರಿತ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ದಿನೇದಿನೆ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಕಳೆದ ಮೂರು ತಿಂಗಳಿಂದ ರೈತರ ಹೋರಾಟ ನಡೆಯುತ್ತಿದೆ. ಹೀಗಾಗಿ, ಪ್ರಧಾನಿಗೆ ಮುಖ ತೋರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಇದೇ ಕಾರಣಕ್ಕೆ ಅವರು ಗಡ್ಡ ಬಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅಸಮರ್ಥ, ಅನೈತಿಕ, ಭ್ರಷ್ಟ ಸರ್ಕಾರವಿದೆ. ಬಿ.ಎಸ್. ಯಡಿಯೂರಪ್ಪ ಜನರ ಆಶೀರ್ವಾದದಿಂದ ಸಿಎಂ ಆಗಿಲ್ಲ. ಮೊದಲ ಸಲ ಬಹುಮತ ಸಾಬೀತು ಮಾಡದೇ ವಿಫಲರಾಗಿದ್ದರು. ನಂತರ ಶಾಸಕರನ್ನು ಖರೀದಿಸಿ ಈಗ ಸಿಎಂ ಆಗಿದ್ದಾರೆ. ಪ್ರಣಾಳಿಕೆಯ ಎಲ್ಲ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್ ಮಾತ್ರ. ಇಷ್ಟೆಲ್ಲ ಮಾಡಿದರೂ ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ. ಆದರೆ ಬಿಜೆಪಿಯ ಸರ್ಕಾರ ಈಗ ಆಫ್ ಆಗಿಬಿಟ್ಟಿದೆ ಎಂದು ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಮಾಜಿ ಸಿಎಂ ಈಗ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಕೆಟ್ಟು ನಿಂತ ಬಸ್​ನಂತಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸರ್ಕಾರದ ಗೇರ್ ಹಾಕಲು ಬರುವುದಿಲ್ಲ. ಹೀಗಾಗಿ ಬಸ್ ಹೇಗೆ ಮುಂದಕ್ಕೆ ಹೋಗುತ್ತೆ? ಎಂದು ಪ್ರಶ್ನಿಸಿದ ಅವರು, ಯಾವುದಕ್ಕೆ ಕೇಳಿದರೂ ಹಣ ಇಲ್ಲ ಎನ್ನುತ್ತಾರೆ. ಹಣ ಇಲ್ಲ ಅಂದಮೇಲೆ ಮುಖ್ಯಮಂತ್ರಿಗಳು ಯಾಕಿದೀರಪ್ಪ? ಎಂದು ಹರಿತವಾಗಿ ವ್ಯಂಗ್ಯವಾಡಿದರು. ಅಲ್ಲದೇ, ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಬರುತ್ತೇವೆ ಎಂದು ಹೇಳುತ್ತಲೇ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ಧ್ರುವ ನಾರಾಯಣ ಬೆಂಗಳೂರಿನಲ್ಲಿ ಭಾನುವಾರ ಅಧಿಕಾರ ಸ್ವೀಕರಿಸಿದರು. ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹಾಗೂ  ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ‌, ರಾಹುಲ್ ಗಾಂಧಿಯವರಿಗೆ ಅಭಿನಂದನಾ ನಿರ್ಣಯವನ್ನು ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್.ಶಂಕರ್ ಸಭೆಯಲ್ಲಿ ಮಂಡಿಸಿದರು.

ಈ ಸಮಾರಂಭದ ನಂತರ ರಾಜ್ಯ ಕಾಂಗ್ರೆಸ್​ ಎರಡು ಹೆಬ್ಬಾಗಿಲಿರುವ ಮನೆಯಾಗಿದ್​ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದೆಡೆ ಮುಖ ಮಾಡಿದ್ದರೆ, ಮತ್ತೊಂದು ಗುಂಪು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೆರಳನ್ನು ಹಿಂಬಾಲಿಸುತ್ತಿದೆ. ಇದು ಕಾಂಗ್ರೆಸ್ಸಿಗೆ ಇರುವ ನಿಜವಾದ ಸಮಸ್ಯೆ. ಇದನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಇಬ್ಬರೂ ಜನಾನುರಾಗಿ ನಾಯಕರು ಮತ್ತು ಪ್ರಬಲ ಸಮುದಾಯದ ಬೆಂಬಲ ಇರುವವರು. ಈ ಇಬ್ಬರಿಗೂ ಮುಖ್ಯಮಂತ್ರಿ ಆಗಬೇಕೆಂಬ ಪ್ರಬಲ ಹಟವಿದೆ. ಹಾಗಾಗಿ ಈ ಇಬ್ಬರ ಜಂಗೀ ಕುಸ್ತಿ ಸದ್ಯಕ್ಕೆ ಕೊನೆ ಕಾಣುವ ಲಕ್ಷಣವಿಲ್ಲ. ಇದು ಪಕ್ಷವನ್ನು ಹೈರಾಣವಾಗಿಸಿದೆ ಹಾಗೂ ಇದರಿಂದ ಪಕ್ಷದ ಬಲವರ್ಧನೆ ನಿಜವಾಗಿ ಕುಂಠಿತಗೊಂಡಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿತ್ತು. ಇದೀಗ ನೂತನ ಕಾರ್ಯಾಧ್ಯಕ್ಷರುಗಳ ನೇಮಕ ಪಕ್ಷವನ್ನು ಎತ್ತ ಎಳೆಯಲಿದೆ ಕಾದುನೋಡಬೇಕಿದೆ.

ಇದನ್ನೂ ಓದಿ: KS Eshwarappa ‘ಗೋವಿನ ಶಾಪದಿಂದ ಸಿದ್ದರಾಮಯ್ಯ CM ಸ್ಥಾನ ಕಳೆದುಕೊಂಡರು, ಈಗ ರಾಮನ ವಿಚಾರದಲ್ಲಿ ಮಾತಾಡಿ..’

Published On - 2:25 pm, Sun, 21 February 21