AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜನ ಸ್ಮರಣಾರ್ಥ ಏರ್ಪಡಿಸಿರುವ ಕೂಟದಲ್ಲಿ ಭಾಗಿಯಾಗಲ್ಲ ಎಂದಿರುವ ಪ್ರಿನ್ಸ್ ಹ್ಯಾರಿ ರಾಣಿ ಎಲಿಜಬೆತ್ ಆಮಂತ್ರಣ ತಿರಸ್ಕರಿಸಿದ್ದಾರೆ!

ಪತ್ನಿ ಮೇಘನ್ ಜೊತೆ ರಾಜಮನೆತನವನ್ನು ತೊರೆದು ಎರಡು ವರ್ಷಗಳ ಹಿಂದೆ ಉತ್ತರ ಅಮೇರಿಕಾಕ್ಕೆ ತೆರಳಿದ ನಂತರ ಹ್ಯಾರಿ ತನ್ನ ಅಜ್ಜನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದು ಅವರು ಯುಕೆಗೆ ಬಂದ ಕೇವಲ ಎರಡನೇ ಸಂದರ್ಭವಾಗಿದೆ.

ಅಜ್ಜನ ಸ್ಮರಣಾರ್ಥ ಏರ್ಪಡಿಸಿರುವ ಕೂಟದಲ್ಲಿ ಭಾಗಿಯಾಗಲ್ಲ ಎಂದಿರುವ ಪ್ರಿನ್ಸ್ ಹ್ಯಾರಿ ರಾಣಿ ಎಲಿಜಬೆತ್ ಆಮಂತ್ರಣ ತಿರಸ್ಕರಿಸಿದ್ದಾರೆ!
ಪತ್ನಿ ಮೇಘನ್ ಮತ್ತು ರಾಣಿ ಎಲಿಜಬೆತ್ ಜೊತೆ ಪ್ರಿನ್ಸ್ ಹ್ಯಾರಿ
TV9 Web
| Edited By: |

Updated on: Mar 12, 2022 | 6:26 PM

Share

ಲಂಡನ್: ಬ್ರಿಟನ್ ನಲ್ಲಿ ತಮ್ಮ ಭದ್ರತಾ ರಕ್ಷಣೆಗೆ ಸಂಬಂಧಿಸಿದ ಕಾನೂನು ವ್ಯಾಜ್ಯವೊಂದರಲ್ಲಿ ಸಿಲುಕಿರುವ ರಾಜಕುಮಾರ ಹೆನ್ರಿ (Prince Henry) ಅವರು ಮಹಾರಾಣಿ ಎರಡನೇ ಎಲಿಜಬೆತ್ (Queen Elizabeth II) ಅವರ ದಿವಂಗತ ಪತಿಯ ಸ್ಮರಣಾರ್ಥ ಏರ್ಪಡಿಸಲಾಗಿರುವ ಪ್ರಾರ್ಥನಾ ಕೂಟದಲ್ಲಿ (memorial service) ಭಾಗವಹಿಸುವುದು ಸಾಧ್ಯವಿಲ್ಲವೆಂದು ಶನಿವಾರ ಹೇಳಿರುವುದರಿಂದ ಮಹಾರಾಣಿಯವರನ್ನು ನಿರ್ಲಕ್ಷಿಸಿರುವ ಆಪಾದನೆಗೆ ಗುರಿಯಾಗಿದ್ದಾರೆ.

ಮಾರ್ಚ್ 29ರಂದು ವೆಸ್ಟ್ ಮಿನ್ಸ್ಟರ್ ನಲ್ಲಿ ನಡೆಯಲಿರುವ ಕೂಟದಲ್ಲಿ ಹ್ಯಾರಿ ಹಾಜರಾಗಲಾರರು ಎನ್ನುವುದನ್ನು ಬಾತ್ಮೀದಾರರೊಬ್ಬರು ದೃಢೀಕರಿಸಿರುವರಾದರೂ ಈ ಕೂಟದ ಕೇವಲ ಎರಡು ವಾರಗಳ ನಂತರ ನೆದರ್ ಲ್ಯಾಂಡ್ಸ್ ನಲ್ಲಿ ನಡೆಯಲಿರುವ ಇನ್ವಿಕ್ಟಸ್ ಗೇಮ್ಸ್ (ಗಾಯಗೊಂಡಿರುವ, ಅಂಗವೈಕಲ್ಯಕ್ಕೊಳಗಾಗಿರುವ ಇಲ್ಲವೇ ಅನಾರೋಗ್ಯದಿಂದ ಬಳಲುತ್ತಿರುವ ಸಶಸ್ತ್ರಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಲ್ಲವೇ ನಿವೃತ್ತರಾಗಿರುವವರಿಗೆ ನಡೆಯುವ ಕ್ರೀಡಾಕೂಟ) ವೀಕ್ಷಿಸಲು ತೆರಳಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದೆರಡು ವಾರಗಳಿಂದ ಉಕ್ರೇನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮುಖಪುಟದಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ಬ್ರಿಟಿಷ್ ಪತ್ರಿಕೆಗಳು ಈಗ ಪ್ರಿನ್ಸ್ ಹ್ಯಾರಿ ಮಹಾರಾಣಿಯ ಆಮಂತ್ರಣ ತಿರಸ್ಕರಿಸಿರುವುದನ್ನು ಮುಖಪುಟಗಳಲ್ಲಿ ಪ್ರಕಟಿಸುತ್ತಿವೆ.

ಯುಕೆ ಸರ್ಕಾರದಿಂದ ಒದಗಿಸಲಾಗಿದ್ದ ರಾಜ ರಕ್ಷಣೆಯನ್ನು ಹಿಂತೆಗೆದುಕೊಂಡ ನಂತರ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಹ್ಯಾರಿ ತನ್ನ ಅಜ್ಜ ಪ್ರಿನ್ಸ್ ಫಿಲಿಪ್ ಪ್ರಾರ್ಥನಾ ಕೂಟಕ್ಕೆ ಸಂಬಂಧಿಸಿದಂತೆ ‘ಬ್ಲಾಕ್‌ಮೇಲ್‘ ಮಾಡಿದ್ದಾರೆ ಎಂದು ಬ್ರಿಟಿಶ್ ಸಾಮ್ರಾಜ್ಯದ ಜೀವನಚರಿತ್ರೆ ಬರೆಯುವ ಏಂಜೆಲಾ ಲೆವಿನ್ ಆರೋಪಿಸಿದ್ದಾರೆ.

ಸಿಂಹಾಸನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಅವರ ಎರಡನೇ ಮಗನಾಗಿರುವ ಹ್ಯಾರಿ ಆಮಂತ್ರಣವನ್ನು ತಿರಸ್ಕರಿಸುವ ಮೂಲಕ ಡ್ಯೂಕ್ ಆಫ್ ಎಡಿನ್ಬರ್ಗ್ (ಫಿಲಿಪ್) ಅವರಿಗೆ ಅಗೌರವ ಸಲ್ಲಿಸಿರುವರಾದರೂ ಅಸಲಿಗೆ ಅವರು ಮಹಾರಾಣಿಗೆ ಅವಮಾನ ಮಾಡುತ್ತಿದ್ದಾರೆ,’ ಎಂದು ಲೆವಿನ್ ಯುಕೆ ಮಾಧ್ಯಮಗಳಿಗೆ ತಿಳಿಸಿದರು.

ಮಹಾರಾಣಿ ಎಲಿಜಬೆತ್ ಅವರನ್ನು ಮದುವೆಯಾಗಿ ಅವರೊಂದಿಗೆ 73 ವರ್ಷಗಳ ಕಾಲ ಸಹಬಾಳ್ವೆ ನಡೆಸಿದ ಪ್ರಿನ್ಸ್ ಫಿಲಿಪ್ ಕಳೆದ ಏಪ್ರಿಲ್ ನಲ್ಲಿ ತಮ್ಮ 100 ನೇ ಹುಟ್ಟುಹಬ್ಬಕ್ಕೆ ಕೆಲವೇ ವಾರ ಉಳಿದಿದ್ದಾಗ ನಿಧನ ಹೊಂದಿದರು.

ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಹ್ಯಾರಿ ಅವರೂ ಸೇರಿದಂತೆ ಕೇವಲ 30 ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಸಲಾಗಿತ್ತು. ಸರ್ಕಾರದ ನಿಯಮಾವಳಿಗಳ ಹಿನ್ನೆಲೆಯಲ್ಲಿ ಮಹಾರಾಣಿ ಒಬ್ಬಂಟಿಯಾಗಿ ಒಂದೆಡೆ ಕೂತಿದ್ದರು.

ಈಗ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಡ್ಯೂಕ್ ಆಫ್ ಎಡಿನ್ಬರ್ಗ್ ಅವರ ಪ್ರಾರ್ಥನಾ ಕೂಟವು ರಾಷ್ಟ್ರೀಯ ಹಬ್ಬದಂತೆ ಆಚರಿಸಲ್ಪಡಲಿದೆ ಎಂದು ಹೇಳಲಾಗುತ್ತಿದೆ. ಅವರ ದೀರ್ಘಾಯುಷ್ಯ ಮತ್ತು ಬ್ರಿಟಿಷ್ ಸಾಮ್ರಾಜ್ಯಕ್ಕೆ ಅವರಿಂದ ಒದಗಿದ ಸೇವೆಯನ್ನು ಈ ಸಂದರ್ಭದಲ್ಲಿ ನೆನೆಸಲಾಗುವುದು.

ಹ್ಯಾರಿ ಯಾಕೆ ಪ್ರಾರ್ಥನಾ ಕೂಟದಲ್ಲಿ ಭಾಗಿಯಾಗುತ್ತಿಲ್ಲ ಎನ್ನುವುದಕ್ಕೆ ಅವರ ಬಾತ್ಮೀದಾರ ಸಮರ್ಪಕವಾದ ಉತ್ತರ ನೀಡಲಿಲ್ಲವಾದರೂ ಅವರು ಇಷ್ಟರಲ್ಲೇ ತಮ್ಮ ಅಜ್ಜಿಯನ್ನು (ಮಹಾರಾಣಿ ಎಲಿಜಬೆತ್) ಬೇಟಿಯಾಗಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಪತ್ನಿ ಮೇಘನ್ ಜೊತೆ ರಾಜಮನೆತನವನ್ನು ತೊರೆದು ಎರಡು ವರ್ಷಗಳ ಹಿಂದೆ ಉತ್ತರ ಅಮೇರಿಕಾಕ್ಕೆ ತೆರಳಿದ ನಂತರ ಹ್ಯಾರಿ ತನ್ನ ಅಜ್ಜನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದು ಅವರು ಯುಕೆಗೆ ಬಂದ ಕೇವಲ ಎರಡನೇ ಸಂದರ್ಭವಾಗಿದೆ. ಅವರ ನಿರ್ಧಾರದ ಪರಿಣಾಮವಾಗಿ, ಯುಕೆ ಸರ್ಕಾರವು ಬ್ರಿಟನ್‌ಗೆ ನೀಡಿದ ಭೇಟಿಗಳ ಮೇಲೆ ಅವರ ತೆರಿಗೆದಾರ-ನಿಧಿಯ ರಕ್ಷಣೆಯನ್ನು ಹಿಂತೆಗೆದುಕೊಂಡಿತು ಮತ್ತು ಸರ್ಕಾರದ ಈ ನಡೆಯನ್ನು ಹ್ಯಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಹ್ಯಾರಿ ಅವರು ಹೇಗ್ ನಲ್ಲಿ ಏಪ್ರಿಲ್ 16ರಿಂದ ನಡೆಯಲಿರುವ ಇನ್ವಿಕ್ಟಸ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿರುವುದು ನಿಜವಾಗಿರುವುದರಿಂದ ಅಲ್ಲಿ ನಡೆಯದ ಭದ್ರತಾ ಲೋಪ ಅವರ ತವರು ಬ್ರಿಟನಲ್ಲಿ ಹೇಗೆ ನಡೆಯುತ್ತದೆ ಎಂದು ಯುಕೆಯ ರಾಜಕೀಯ ವಿಶ್ಲೇಷಣೆಕಾರರು ಪ್ರಶ್ನಿಸುತ್ತಿದ್ದಾರೆ.

‘ಹ್ಯಾರಿ ಅವರು ಒಂದು ವಾರದ ಅವಧಿಯ ಈವೆಂಟ್‌ನಲ್ಲಿ ಹಾಜರಾಗಲು ಮುಂದಾಗಿದ್ದಾರೆ; ಆದರೆ ಗುಪ್ತಚರ ವಿಭಾಗದ ಜೊತೆ ಸಂಪರ್ಕಿಸದೆ ತಾನು ಯುಕೆ ನಲ್ಲಿ ಸುರಕ್ಷಿತನಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ,’ ಎಂದು ಐಟಿವಿ ನ್ಯೂಸ್ ರಾಯಲ್ ಸಂಪಾದಕ ಕ್ರಿಸ್ ಶಿಪ್ ಟ್ವೀಟ್ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್‌ನೊಂದಿಗೆ ಬಹು-ಮಿಲಿಯನ್ ಡಾಲರ್ ಒಪ್ಪಂದದ ಭಾಗವಾಗಿ ಇನ್ವಿಕ್ಟಸ್ ಗೇಮ್ಸ್ ಕುರಿತು ಹ್ಯಾರಿ ತೆರೆಮರೆಯ ಸಾಕ್ಷ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕೋವಿಡ್ ಸೌಮ್ಯ ಸೋಂಕಿನಿಂದ ಬಳಲಿದ ನಂತರ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆ ಮತ್ತು ಬೇರೆ ಅನಾರೋಗ್ಯಗಳ ನಿಮಿತ್ತ ಮಹಾರಾಣಿ ಎಲಿಜಬೆತ್ ಅವರು ಕಾಮನ್ ವೆಲ್ತ್ ಡೇ ಅಂಗವಾಗಿ ವೆಸ್ಟ್ಮಿನ್ ಸ್ಟರ್ ಅಬ್ಬಿಯಲ್ಲಿ ಸೋಮವಾರ ನಡೆಯಲಿರುವ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:   ಉಕ್ರೇನ್​​​ನಿಂದ ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿ ಬಂದ್ರಾ? ಈ ರೀತಿ ಸುಳ್ಳು ಹೇಳಬಾರದು;ಕೆಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಂಸದ ತೇಜಸ್ವಿ ಸೂರ್ಯ