ಮೈಸೂರು: ಜಿ.ಟಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆಯ ಕಣವಾಗಿರುವ ಮೈಮುಲ್ ಚುನಾವಣೆ (ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ) ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದೆ. ಮೈಮುಲ್‌ನ 15 ಸ್ಥಾನಕ್ಕೆ 29 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆದ್ರೆ ಮತದಾನ ಕೇಂದ್ರದ ಒಳಗಡೆ ಮತ್ತು ಹೊರಗಡೆ ಗಲಾಟೆ ಶುರುವಾಗಿದೆ. ಮತದಾನ ಕೇಂದ್ರದ ಒಳಗಡೆ ಎಂಡಿಸಿಸಿ ಉಪಾಧ್ಯಕ್ಷ ಸದಾನಂದ, ಮಾಜಿ ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್ ನಡುವೆ ಮಾತಿನ ಚಕಮಕಿ ಶುರುವಾಗಿದ್ರೆ. ಹೊರಗಡೆ ಕಾರ್ಯಕರ್ತರ ನಡುವೆ ಕೂಗಾಟ ರಂಪಾಟ ಜೋರಾಗಿದೆ. ಮತದಾರರ ಮನವೂಲಿಸುವ ಸಂದರ್ಭದಲ್ಲಿ ಜಿಟಿ ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಬಣದ ಕಾರ್ಯಕರ್ತರ ನಡುವೆ ಕಿರಿಕ್ ಆಗಿದೆ. ಸದ್ಯ ಪೊಲೀಸರು ಗಲಾಟೆ ಮಾಡುತ್ತಿದ್ದವರನ್ನ ಸಮಾಧಾನ ಪಡಿಸಿದ್ದಾರೆ.
ಅಖಾಡಕ್ಕಿಳಿದ ಜಿಟಿಡಿ ಪುತ್ರ ಹರೀಶ್‌ಗೌಡ
ತಂದೆಯ ಪ್ರತಿಷ್ಠೆ ಉಳಿಸಲು ಜಿ.ಟಿ. ದೇವೇಗೌಡ ಪುತ್ರ ಜಿ.ಡಿ.ಹರೀಶ್‌ಗೌಡ ಖುದ್ದು ಅಖಾಡಕ್ಕಿಳಿದಿದ್ದಾರೆ. ಚುನಾವಣಾ ಮತಕೇಂದ್ರದ ಬಳಿಯೇ ಮೊಕ್ಕಾಂ ಹೂಡಿದ್ದಾರೆ. ತಂದೆಯ ಪ್ರತಿಷ್ಠೆ ಉಳಿಸಲು ಮೈಮುಲ್ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಆಲನಹಳ್ಳಿ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಮತದಾನ ನಡೆಯುತ್ತಿದ್ದು ಕೊನೆ ಕ್ಷಣದಲ್ಲಿ ಮತದಾರರನ್ನ ಸೆಳೆಯಲು ಅಭ್ಯರ್ಥಿಗಳ ಕಸರತ್ತು ನಡೆಸುತ್ತಿದ್ದಾರೆ.
ಒಟ್ಟು 34 ಜನ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು ಮೂವರು ವಾಪಸ್ ಪಡೆದಿದ್ದಾರೆ. ಹೀಗಾಗಿ ಅಂತಿಮವಾಗಿ 29 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಮೈಸೂರಿನ 7 ವಿಭಾಗ ಹುಣಸೂರಿನ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು 11 ಸಾಮಾನ್ಯ 4 ಮಹಿಳೆಯರಿಗೆ ಮೀಸಲಾಗಿದೆ. 4 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು ಹಾಲು ಒಕ್ಕೂಟದ ಮೆಗಾ ಡೈರಿ ಆವರಣದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಹಾಲು ಉತ್ಪಾದಕರ ಸಂಘದ ಪರವಾಗಿ ಒಬ್ಬರಿಂದ ಮತದಾನ ನಡೆಯುತ್ತೆ. ಹಾಗೂ 1052 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ತಮ್ಮ ಬಣದ ಅಭ್ಯರ್ಥಿ ಗೆಲ್ಲಿಸಲು ಪ್ರಮುಖ ನಾಯಕರು ಪಣ ತೊಟ್ಟಿದ್ದಾರೆ. ಜಿ.ಟಿ.ದೇವೇಗೌಡ ಬಣ ಸೋಲಿಸಲು ಜೆಡಿಎಸ್ ರಣತಂತ್ರ ಹೆಣೆದಿದೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಜಿಟಿಡಿ ಶಕ್ತಿ ಕುಂದಿಸಲು JDS ನಾಯಕರು ಯತ್ನಿಸುತ್ತಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಶಾಸಕ ಕೆ.ಮಹದೇವ್ ಪುತ್ರನನ್ನ ಸೋಲಿಸಲು ಸಾ.ರಾ.ಮಹೇಶ್ ತಂತ್ರ ಹೆಣೆದಿದ್ದಾರೆ.