ನನ್ನತ್ರ ಸಿಡಿ ಇದೆ ಎಂದು ನಾನೆಲ್ಲಿ ಹೇಳಿದ್ದೆ; ಮಾಧ್ಯಮದವರ ವಿರುದ್ಧವೇ ಹರಿಹಾಯ್ದ ರಾಜಶೇಖರ ಮುಲಾಲಿ

| Updated By: ganapathi bhat

Updated on: Mar 09, 2021 | 1:09 PM

ನಾನು ಎಲ್ಲಿಯೂ ಸಹ ನನ್ನ ಬಳಿ ಸಿಡಿ ಇವೆ ಅಂತಾ ಹೇಳಿಲ್ಲ. ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮಾಧ್ಯಮದವರು ಏನೂ ಬೇಕಾದರೂ ಹುಟ್ಟಿಸಿಕೊಳ್ಳುತ್ತೀರಿ. ನಿಮಗೆ ಬೇಕಾದಂತೆ ತೋರಿಸ್ತೀರಿ. ಇದು ತಪ್ಪು ಅಲ್ವಾ, ನಾನೆಲ್ಲಿ ಹೇಳಿದ್ದೇನೆ ಅನ್ನೋದನ್ನ ತೋರಿಸಿ: ರಾಜಶೇಖರ ಮುಲಾಲಿ

ನನ್ನತ್ರ ಸಿಡಿ ಇದೆ ಎಂದು ನಾನೆಲ್ಲಿ ಹೇಳಿದ್ದೆ; ಮಾಧ್ಯಮದವರ ವಿರುದ್ಧವೇ ಹರಿಹಾಯ್ದ ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ
Follow us on

ಧಾರವಾಡ: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ವಿಚಾರವಾಗಿ ದಿನೇಶ ಕಲ್ಲಹಳ್ಳಿ ಕೇಸ್ ವಾಪಸ್ ಪಡೆಯಲು ನಿರ್ಧರಿಸಿರುವುದಕ್ಕೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಒತ್ತಡಗಳು ಏನಿದೆಯೋ ಗೊತ್ತಿಲ್ಲ, ಬೇರೆ ಏನಾದರೂ ತೊಂದರೆ ಆಗಿರಬಹುದು. ಆದರೆ, ಆ ನಿರ್ಧಾರವೀಗ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ದೇಶದಲ್ಲಿ ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ ಮುಲಾಲಿ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಒಂದೇ ದಿನ ಹಿರೋ ಆಗಿ, ಅವತ್ತೇ ವಿಲನ್ ಆದವರೂ ಇದ್ದಾರೆ. ಸಿಡಿ ಕೇಸ್‌ನಲ್ಲಿ ನನ್ನನ್ನೂ ಪಾರ್ಟಿ ಮಾಡಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಈ ವಿಚಾರ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ನಿನ್ನೆ ಯಾರೋ ಬಳ್ಳಾರಿಯ ನನ್ನ ಕಚೇರಿಗೆ ಹೋಗಿದ್ದರಂತೆ. ಆದರೆ, ಸಂಬಂಧಿಸಿದ ಕೋರ್ಟ್ ಕಾಪಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ರಮೇಶ್​ ಜಾರಕಿಹೊಳಿ ಇದೊಂದು ಷಡ್ಯಂತ್ರ ಅಂತಾ ಹೇಳ್ತಾ ಇದ್ದಾರೆ. ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ಹೀಗಾಗಿ ಈ ಭಾಗದ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬೇರೆ ಬೇರೆ ರಾಜಕಾರಣಿಗಳ ಸಿಡಿ ವಿಚಾರವಾಗಿ ಮಾತನಾಡಿರುವ ರಾಜಶೇಖರ ಮುಲಾಲಿ, ನಾನು ಎಲ್ಲಿಯೂ ಸಹ ನನ್ನ ಬಳಿ ಸಿಡಿ ಇವೆ ಅಂತಾ ಹೇಳಿಲ್ಲ. ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮಾಧ್ಯಮದವರು ಏನೂ ಬೇಕಾದರೂ ಹುಟ್ಟಿಸಿಕೊಳ್ಳುತ್ತೀರಿ. ನಿಮಗೆ ಬೇಕಾದಂತೆ ತೋರಿಸ್ತೀರಿ. ಇದು ತಪ್ಪು ಅಲ್ವಾ, ನಾನೆಲ್ಲಿ ಹೇಳಿದ್ದೇನೆ ಅನ್ನೋದನ್ನ ತೋರಿಸಿ. ನೀವು ಟಿಆರ್​ಪಿಗೋಸ್ಕರ ನಿಮಗೆ ಬೇಕಾಗಿದ್ದನ್ನು ಮಾತ್ರ ತೋರಿಸ್ತೀರಿ ಎನ್ನುವ ಮೂಲಕ ಮಾಧ್ಯಮಗಳ ವಿರುದ್ಧವೇ ಹರಿಹಾಯ್ದಿದ್ದಾರೆ.

ಈ ವಿಚಾರವಾಗಿ ಮೊನ್ನೆಯಷ್ಟೇ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿಯಾಗಿತ್ತು. ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಕಾರಣಕ್ಕೆ ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರಿಂದ ನೋಟಿಸ್ ಜಾರಿಯಾಗಿತ್ತು. ರಾಜಶೇಖರ್ ಮುಲಾಲಿಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚನೆಯನ್ನೂ ನೀಡಿದ್ದಾರೆ. ಮುಲಾಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡ್ಯದ ಮಾನವ ಹಕ್ಕು ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ಕಬ್ಬನ್‌ಪಾರ್ಕ್ ಪೊಲೀಸ್‌‌ ಠಾಣೆಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ:
ನನ್ನ ಬಳಿ 19 ಸಿಡಿಗಳಿವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ

ಅವಶ್ಯಬಿದ್ದರೆ ನಾನೇ ಪೊಲೀಸ್ ಠಾಣೆಗೆ ಬಂದು ದೂರು ಹಿಂಪಡೆಯುತ್ತೇನೆ; ದಿನೇಶ್ ಕಲ್ಲಹಳ್ಳಿ