ಅವಶ್ಯಬಿದ್ದರೆ ನಾನೇ ಪೊಲೀಸ್ ಠಾಣೆಗೆ ಬಂದು ದೂರು ಹಿಂಪಡೆಯುತ್ತೇನೆ; ದಿನೇಶ್ ಕಲ್ಲಹಳ್ಳಿ
Ramesh Jarkiholi CD Controversy: ದೂರು ವಾಪಸ್ ಪಡೆದ ಮಾತ್ರಕ್ಕೆ ಕೇಸ್ ಮುಕ್ತಾಯವಾಗುವುದಿಲ್ಲ. ದಿನೇಶ್ ಕಲ್ಲಹಳ್ಳಿ ಕೊಟ್ಟಿರುವುದು ಕೇವಲ ಅರ್ಜಿ ಅಷ್ಟೇ ಆಗಿದ್ದು, ಯುವತಿಯನ್ನು ಪತ್ತೆ ಹಚ್ಚಿ ಆಕೆಯ ಹೇಳಿಕೆಯನ್ನು ಪಡೆಯಲಾಗುತ್ತದೆ. ಯುವತಿಯ ಹೇಳಿಕೆ ಆಧರಿಸಿ ಪ್ರಕರಣ ಮುಂದುವರೆಯಲಿದೆ ಎಂದು ಸಹ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ರಾಮನಗರ: ‘ದೂರು ಹಿಂಪಡೆಯಲು ನಾನೇ ಖುದ್ದಾಗಿ ಬರಬೇಕು ಎಂದಾದಲ್ಲಿ ಠಾಣೆಗೆ ತೆರಳಿ ದೂರು ಹಿಂಪಡೆಯಲು ಅರ್ಜಿ ಸಲ್ಲಿಸುತ್ತೇನೆ. ನೈತಿಕತೆಯ ಕಾರಣದಿಂದ ನಾನು ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ದೂರನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ’ ಎಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತಮ್ಮ ಸ್ವಗ್ರಾಮ ಕಲ್ಲಹಳ್ಳಿಯಲ್ಲಿ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಟಿವಿ 9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್ ನೀಡಿದರೆ ಮಾಹಿತಿದಾರ ಠಾಣೆಗೆ ಬಂದು ತನಗೆ ತಿಳಿದಿರುವಷ್ಟು ಮಾಹಿತಿ ನೀಡುತ್ತಾನೆ. ಹೀಗಾಗಿ, ನಾನು ದೂರು ಹಿಂಪಡೆದರೂ ತಕ್ಷಣ ತನಿಖೆ ನಿಲ್ಲುವುದಿಲ್ಲ. ಯಾವುದೇ ಮಾಹಿತಿ ಅಪೇಕ್ಷಿಸದರೂ ಮಾಹಿತಿ ನೀಡಲು ಬದ್ಧನಾಗಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.
ದೂರು ನೀಡಿದವರೇ ದೂರು ಹಿಂಪಡೆಯುವ ಅರ್ಜಿ ನೀಡಬೇಕೆ? ವಕೀಲರು ದೂರು ಹಿಂಪಡೆಯುವ ಅರ್ಜಿ ನೀಡಿದರೆ ದೂರು ಹಿಂಪಡೆಯಲು ಸಾಧ್ಯವಾಗದು. ದೂರು ನೀಡಿದವರೇ ದೂರು ಹಿಂಪಡೆಯುವಂತೆ ಅರ್ಜಿ ನೀಡಬೇಕು ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ಕಬ್ಬನ್ ಪಾರ್ಕ್ ಪೊಲೀಸರು ಇಂದು ದಿನೇಶ್ ಕಲ್ಲಹಳ್ಳಿ ಪರ ವಕೀಲರು ನಿಡಿದ ಅರ್ಜಿ ಆಧರಿಸಿ ದೂರು ಹಿಂಪಡೆಯುತ್ತಾರೋ ಇಲ್ಲವೋ ಎಂಬ ಕುರಿತು ಕಲುತೂಹಲ ಮೂಡಿದೆ. ಈ ಕುರಿತು ಇನ್ನಷ್ಟೇ ಸ್ಪಷ್ಟ ಚಿತ್ರಣ ದೊರೆಯಬೇಕಿದೆ.
ದೂರು ವಾಪಸ್ ಪಡೆದ ಮಾತ್ರಕ್ಕೆ ಕೇಸ್ ಮುಕ್ತಾಯವಾಗುವುದಿಲ್ಲ. ದಿನೇಶ್ ಕಲ್ಲಹಳ್ಳಿ ಕೊಟ್ಟಿರುವುದು ಕೇವಲ ಅರ್ಜಿಯಷ್ಟೇ ಆಗಿದ್ದು, ಯುವತಿಯನ್ನು ಪತ್ತೆ ಹಚ್ಚಿ ಆಕೆಯ ಹೇಳಿಕೆಯನ್ನು ಪಡೆಯಲಾಗುತ್ತದೆ. ಯುವತಿಯ ಹೇಳಿಕೆ ಆಧರಿಸಿ ಪ್ರಕರಣ ಮುಂದುವರೆಯಲಿದೆ ಎಂದು ಸಹ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮತ್ತೊಮ್ಮೆ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಲು ಚಿಂತನೆ ದೂರು ಹಿಂಪಡೆವ ಅರ್ಜಿ ಸಲ್ಲಿಸಿರುವ ವಿಚಾರವಾಗಿ ದಿನೇಶ್ ಕಲ್ಲಹಳ್ಳಿ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಲು ಕಬ್ಬನ್ ಪಾರ್ಕ್ ಪೊಲೀಸರು ಚಿಂತನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ದೂರು ವಾಪಸ್ ಪಡೆಯಲು ಕಾರಣವೇನು? ಬೆದರಿಕೆ ಕರೆ ಬರುತ್ತಿರುವುದಕ್ಕೆ ವಾಪಸ್ ಪಡೆಯುತ್ತಿದ್ದೀರಾ? ದೂರು ವಾಪಸ್ ಪಡೆಯುವ ಹಿಂದೆ ಒತ್ತಡ ಇದೆಯಾ? ಇದರ ಹಿಂದೆ ರಾಜಕೀಯ ಒತ್ತಡ ಇದೆಯಾ? ಎಂಬ ಅನುಮಾನಗಳಿಗೆ ಉತ್ತರ ಪಡೆಯಲು ದಿನೇಶ್ ಕಲ್ಲಹಳ್ಳಿ ಅವರಿಗೆ ಕಬ್ಬನ್ ಪಾರ್ಕ್ ಪೊಲೀಸರು ಮತ್ತೊಮ್ಮೆ ನೋಟಿಸ್ ನೀಡುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಲ್ಯಾಬ್ನಲ್ಲಿ ಟೆಸ್ಟ್ ಆದರೆ ವಿಡಿಯೋದ ಸತ್ಯಾಸತ್ಯತೆ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ
Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ