ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ

|

Updated on: Dec 21, 2020 | 2:10 PM

ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ಮನೆ ಮಾರಾಟದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 47ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ.

ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ದೇಶದಲ್ಲಿ ಮನೆ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 47ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ. ಇನ್ನು, ಬೆಂಗಳೂರು ನಗರದಲ್ಲಿಯೇ ರಿಯಲ್​​ ಎಸ್ಟೇಟ್​ ಉದ್ಯಮ ಶೇ 51 ಇಳಿಕೆ ಕಂಡಿದೆ. ಕೊರೊನಾ ವೈರಸ್​ನಿಂದ ಬಹುತೇಕ ಎಲ್ಲಾ ಕ್ಷೇತ್ರಗಳು ಹೊಡೆತ ತಿಂದಿವೆ. ಮನೆ ಮಾರಾಟ ಕಡಿಮೆ ಆಗಲು ಕೂಡ ಇದೇ ನೇರ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ರಿಯಲ್​ ಎಸ್ಟೇಟ್​ಗಳಿಗೆ ಸಂಬಂಧಿಸಿ ಸಲಹೆ ನೀಡುವ ಸಂಸ್ಥೆ ಅನರಾಕ್  ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ವರದಿ ಸಿದ್ಧಪಡಿಸಲು ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್​, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕೊರೊನಾ ವೈರಸ್​ನಿಂದಾಗಿ ಮನೆ ಕೊಳ್ಳುವವರ ಸಂಖ್ಯೆ ಈ ಏಳು ನಗರಗಳಲ್ಲಿ ಕಡೆಮೆ ಆಗಿವೆ. ಈ ವರ್ಷ 1.38 ಲಕ್ಷ ಮನೆಗಳು ಮಾರಾಟ ಆಗಿದ್ದರೆ, 2019ರಲ್ಲಿ 2.61 ಲಕ್ಷ ಮನೆಗಳು ಮಾರಾಟವಾಗಿದ್ದವು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇನ್ನು ಈ ಏಳು ನಗರಗಳಲ್ಲಿ ಹೊಸ ಮನೆ ನಿರ್ಮಾಣದ ಪ್ರಮಾಣ ಕೂಡ ಕಡಿಮೆ ಆಗಿದೆ. ಈ ಬಾರಿ ಕೇವಲ 1.28 ಲಕ್ಷ ಹೊಸ ಮನೆಗಳು ತಲೆ ಎತ್ತಿದ್ದರೆ ಕಳೆದ ವರ್ಷದ ಹೊಸದಾಗಿ ನಿರ್ಮಾಣವಾದ ಮನೆಗಳ ಸಂಖ್ಯೆ 2.37 ಲಕ್ಷ. ಹೀಗಾಗಿ, ಈ ಬಾರಿ ಮನೆ ಕಟ್ಟುವ ಪ್ರಮಾಣವೂ ಗಣನೀಯವಾಗಿ ಕುಸಿತ ಕಂಡಿದೆ.

ಮಾರ್ಚ್​ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕು ಉಲ್ಬಣಿಸಿತ್ತು. ಇದರ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಹೀಗಾಗಿ, ಮನೆ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ನಿಂತಿತ್ತು. ಆದರೆ, ಕಳೆದ ಎರಡು ತ್ರೈಮಾಸಿಕದಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ಸಾಕಷ್ಟು ಚೇತರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಕಡಿಮೆಯಾಗದ ಗೃಹ ಸಾಲ ಬಡ್ಡಿದರ
ಮನೆ ನಿರ್ಮಾಣ ಕಾರ್ಯ ಕುಸಿತ ಕಂಡ ಬೆನ್ನಲ್ಲೇ ಸಾಕಷ್ಟು ಬ್ಯಾಂಕ್​ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿವೆ. ಹೀಗಾಗಿ, ಸಾಕಷ್ಟು ಜನರು ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಎಲ್ಲವೂ ಸಮಸ್ಥಿತಿಗೆ ಬರಬಹುದು ಎನ್ನುವ ಅಭಿಪ್ರಾಯ ಅನರಾಕ್​ ಸಂಸ್ಥೆಯದ್ದು.

ಬೆಂಗಳೂರಿಗೆ ಎರಡನೇ ಸ್ಥಾನ
ಈ ಬಾರಿ ಅತಿ ಹೆಚ್ಚು ಮನೆ ಮಾರಾಟವಾದ ಸಾಲಿನಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಇಲ್ಲಿ, 44,320 ಮನೆಗಳು ಮಾರಾಟವಾಗಿವೆ. ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, 24,910 ನಿವಾಸಗಳು ಸೇಲ್​ ಆಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 50,450 ಮನೆಗಳು ಮಾರಾಟವಾಗಿದ್ದವು. ಈ ಮೂಲಕ ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣ ಶೇ 51ರಷ್ಟು ಇಳಿಕೆ ಆದಂತಾಗಿದೆ.

ಕೊರೊನಾ ತಂದ ಸಂಕಷ್ಟ: ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಕುಟುಂಬಸ್ಥರು ಆತ್ಮಹತ್ಯೆಗೆ ಶರಣು