ಕೇಂದ್ರದ ನೆರವಿಗಾಗಿ ನಾವು ಕಾಯುವ ಪ್ರಶ್ನೆಯೇ ಇಲ್ಲ: ಕಂದಾಯ ಸಚಿವ ಅಶೋಕ್
ಬೆಂಗಳೂರು: ಕೇಂದ್ರದ ನೆರವಿಗೆ ನಾವು ಕಾಯುವ ಪ್ರಶ್ನೆಯೇ ಇಲ್ಲ, ನಮ್ಮ ರಾಜ್ಯದಲ್ಲಿ ಹಣ ಇದೆ, ಎಷ್ಟು ಹಣ ಬೇಕು ಅಂತಾ ಮನವಿ ಇದೆಯೋ ಅಷ್ಟು ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸಿಎಂ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೋ ಕಾನ್ಪ್‌ರೆನ್ಸ್ ನಂತರ ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ಜತೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ಸುಮಾರು ಎರಡು ಗಂಟೆ ಕಾಲ ಪ್ರವಾಹ ಪೀಡಿತ ರಾಜ್ಯಗಳ […]

ಬೆಂಗಳೂರು: ಕೇಂದ್ರದ ನೆರವಿಗೆ ನಾವು ಕಾಯುವ ಪ್ರಶ್ನೆಯೇ ಇಲ್ಲ, ನಮ್ಮ ರಾಜ್ಯದಲ್ಲಿ ಹಣ ಇದೆ, ಎಷ್ಟು ಹಣ ಬೇಕು ಅಂತಾ ಮನವಿ ಇದೆಯೋ ಅಷ್ಟು ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸಿಎಂ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೋ ಕಾನ್ಪ್‌ರೆನ್ಸ್ ನಂತರ ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ಜತೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ಸುಮಾರು ಎರಡು ಗಂಟೆ ಕಾಲ ಪ್ರವಾಹ ಪೀಡಿತ ರಾಜ್ಯಗಳ ಜೊತೆ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದಿದ್ದಾರೆ. ಸಂವಾದದ ಉದ್ದೇಶ ಜೂನ್ ಮತ್ತು ಜುಲೈ ತಿಂಗಳಲ್ಲಿ ದೇಶದಲ್ಲಿ ಮಳೆಯ ವ್ಯತ್ಯಾಸ ಗಮನಿಸಿ ಅದಕ್ಕೆ ಬೇಕಾಗಿರುವ ರಕ್ಷಣೆ ಮತ್ತು ಪುನರ್ವಸತಿ ಬಗ್ಗೆ ಏನೆಲ್ಲಾ ಮಾಡಬಹುದು ಎಂದು ಚರ್ಚಿಸುವುದಾಗಿತ್ತು ಎಂದು ಕಂದಾಯ ಸಚಿವ ತಿಳಿಸಿದರು.
ರಾಜ್ಯದಲ್ಲಿ ಜೂನ್ ಜುಲೈ ತಿಂಗಳು ಮತ್ತು ಕಳೆದ ಒಂದು ವಾರದಲ್ಲಿ ನದಿಗಳು ಉಕ್ಕಿ ಹರಿದಿರೋದು, ಪಶ್ಚಿಮ ಘಟ್ಟಗಳಲ್ಲಿ ಮಳೆ ಆಗ್ತಿರುವ ವಿಚಾರ ಗಮನಕ್ಕೆ ತಂದಿದ್ದೇವೆ. ೫೬ ತಾಲೂಕು ಪ್ರವಾಹ, ೮೮೫ ಗ್ರಾಮದ ಹಾನಿ, ೩೦೦೦ ಮನೆಗಳು ಹಾನಿ, ೮೦ ಸಾವಿರ ಹೆಕ್ಟೇರ್ ಭೂ ಹಾನಿ, ೩೫೦೦ ಕಿ.ಮೀ ರಸ್ತೆ ಹಾನಿ ಆಗಿದೆ. ರಸ್ತೆ , ಸರ್ಕಾರಿ ಕಟ್ಟಡ, ವಿದ್ಯುತ್ ಉಪಕರಣಗಳ ಹಾನಿ,೨೫೦ ಸೇತುವೆ ಹಾನಿ, ೩೯೩ ಕಟ್ಟಡ ಹಾನಿ ಸೇರಿ ಪ್ರಾಥಮಿಕ ಅಂದಾಜು ೪೦೦೦ ಕೋಟಿಗಳಷ್ಚು ಹಾನಿಯಾಗಿದೆ.
ನಾವು ಇದುವರೆಗೆ ತೆಗದುಕೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರ ಕೊಟ್ಟಿದ್ದೇವೆ. ಭೂ ಕುಸಿತ, ಜನರ ರಕ್ಷಣೆಗೆ ಕೇಂದ್ರ ಸರ್ಕಾರ ನಾಲ್ಕು ಡಿಫೆನ್ಸ್ ಹೆಲಿಕಾಪ್ಟರ್ ಗಳನ್ನು ಮೀಸಲು ಇರಿಸಿದೆ, ರಕ್ಷಣಾ ಸಿಬ್ಬಂದಿಯನ್ನು ಮೀಸಲು ಇಟ್ಟಿದ್ದಾರೆ, ನಾವು ಬೇಕಾದಲ್ಲಿ ಬಳಸಬಹದು, ಅದನ್ನು ನಾವು ಮಡಿಕೇರಿಯಲ್ಲಿ ಬಳಸಲು ಸಿದ್ದತೆ ನಡೆಸಿದ್ದೇವೆ. ಕೃಷ್ಣಾ ಮತ್ತು ಕಾವೇರಿ ಬೇಸಿನ್ ನಲ್ಲಿ ಹೆಚ್ಚು ಮಳೆ ಆಗ್ತಿದೆ, ಡ್ಯಾಮ್ ಟು ಡ್ಯಾಮ್ ಇಂಜಿನಿಯರ್ಸ್ ಸಂಪರ್ಕ, ಅಂತಾರಾಜ್ಯ ಡಿಸಿಗಳ ಸಂಪರ್ಕ ವಿಚಾರವನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದೇವೆ ಎಂದು ಹಿರಿಯ ಸಚಿವ ಅಶೋಕ್ ವಿವರಿಸಿದರು.
ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕಂದಾಯ ಇಲಾಖೆಯಲ್ಲಿ ಬೇಕಾದಷ್ಟು ಹಣ ಇದೆ. ನಾಳೆ ವಿವರವಾದ ಹಾನಿ ವಿವರದೊಂದಿಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಕಳೆದ ವರ್ಷ ಮನೆ ಹಾನಿಗೆ ಹಣ ಬಿಡುಗಡೆಯಾದ ಮನೆಗಳ ಕೆಲಸ ಕೋವಿಡ್ ಮತ್ತಿತರ ಕಾರಣಗಳಿಂದ ಮುಂದುವರಿದಿಲ್ಲ. ಮತ್ತೊಮ್ಮೆ ಹಣ ಪಡೆಯಲು ಫಲಾನುಭವಿಗಳಿಗೆ ಮನವಿಮಾಡುತ್ತೇವೆ. ಕಳೆದ ವರ್ಷದ ಬಾಕಿ ಪರಿಹಾರ ನಾವು ಕೇಳಿದ್ದೇವೆ, ಆದರೆ ಬಾಕಿ ಇಲ್ಲ ಅಂತಾ ಕೇಂದ್ರ ಸರ್ಕಾರ ಹೇಳುತ್ತಿದೆ ಎಂದು ಆರ್ ಅಶೋಕ್ ಪ್ರಧಾನಿಯೊಂದಿಗಿನ ಚರ್ಚೆಯನ್ನು ವಿವರಿಸಿದರು.

ಮುಂದಿನ ದಿನಗಳಲ್ಲಿ ಶಾಶ್ವತ ವಿಪತ್ತು ನಿರ್ವಹಣಾ ಭವನ ನಿರ್ಮಾಣಕ್ಕೆ ಒತ್ತು ಕೊಡುತ್ತೇವೆ, ೨೦೦ ಕೋಟಿ ರೂ.ಗಳನ್ನು ಪ್ರತಿ ವರ್ಷ ನೆರೆ ಬರುವ ಜಿಲ್ಲೆಗಳಲ್ಲಿ ಶಾಶ್ವತ ವಿಪತ್ತು ನಿರ್ವಹಣಾ ಭವನ ನಿರ್ಮಾಣಕ್ಕೆ ಮೀಸಲಿಡುತ್ತೇವೆ. ಕಾಳಜಿ ಕೇಂದ್ರಗಳಲ್ಲಿ ಇನ್ನು ಮುಂದೆ ಪ್ರತಿ ದಿನ ಮೊಟ್ಟೆ, ಉಪ್ಪಿನಕಾಯಿ, ಮೊಸರು, ಪಲ್ಯವನ್ನು ಕಡ್ಡಾಯವಾಗಿ ನೀಡಲು ಇಂದು ಆದೇಶ ಮಾಡುತ್ತೇವೆ. ನೆರೆ ಸಂಧರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಪ್ರಧಾನಿ ಸೂಚಿಸಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಱಪಿಡ್ ಟೆಸ್ಟ್ ಮಾಡುತ್ತೇವೆ. ಪಾಸಿಟಿವ್ ಬಂದರೆ ಅವರನ್ನು ಪ್ರತ್ಯೇಕ ಇರಿಸಲಾಗುತ್ತದೆ ಎಂದು ಅಶೋಕ್ ಹೇಳಿದರು.
೨೦೧೯ರಲ್ಲಿ ಮನೆಹಾನಿಗೆ ೩೩೪ ಕೋಟಿ ರೂ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಕೊಟ್ಟಿದ್ದೇವೆ. ೨೧ ಜಿಲ್ಲೆಗಳಿಗೆ ೨,೩,೪ ನೇ ಕಂತು ಬಿಡುಗಡೆ ಮಾಡಲಾಗಿದೆ. ಯಾಱರು ಫಲಾನುಭವಿಗಳು ಇದ್ದಾರೋ ಅವರು ಮುಂದೆ ಬಂದು ಹಣ ಪಡೆಯಿರಿ. ಬಹಳಷ್ಟು ಜನ ೧ ಲಕ್ಷ ಪಡೆದು ಮನೆ ಕೆಲಸ ಆರಂಭಿಸಿಲ್ಲ ಎಂದು ಅಶೋಕ್ ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಯ ಬಗ್ಗೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಅವರಿಗೆ ನೆನಪಿಸುತ್ತೇನೆ, ೨೦೦೯ ರಲ್ಲಿ ೧೭,೫೦೦ ಕೋಟಿ ನಷ್ಟ ಕೇಳಿದಾಗ ಅಂದು ಕೇಂದ್ರ ೫೦೦ ಕೇವಲ ಕೋಟಿ ಮಾತ್ರ ಕೊಟ್ಟಿತ್ತು ಎಂದು ವಿಪಕ್ಷನಾಯಕರಿಗೆ ಮಾತಿನ ಏಟು ನೀಡಿದರು.
Published On - 2:53 pm, Mon, 10 August 20



