ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ.
ಪೀಣ್ಯ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಥ್ವಿರಾಜ್, ಶಾಹೀನಾಳ ಜೊತೆ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದ. ತನ್ನ ಪತ್ನಿಯ ವ್ಯವಹಾರದ ಬಗ್ಗೆ ತಿಳಿದ ಸಲೀಂ, ಪೃಥ್ವಿರಾಜ್ನ ಕೊಲೆ ಮಾಡಲು ನಿರ್ಧರಿಸಿದ. ಅಂತೆಯೇ, ಶಾಹೀನಾ ಮುಖಾಂತರ ಪೃಥ್ವಿರಾಜ್ಗೆ ಕರೆ ಮಾಡಿ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದ. ತಾನು ತನ್ನ ಕಾರಿನಲ್ಲಿ ಚಾಲಕನ ಜತೆ ಬರುವುದಾಗಿ ಶಾಹೀನಾ ಹೇಳಿದ್ದಳು ಎಂದು ಹೇಳಲಾಗಿದೆ.
ಸದ್ಯ ಬೇರೆ ಬೇರೆ ಕೊಲೆ ಕೇಸ್ನಲ್ಲಿ ಬಾಂಬೆ ಸಲೀಂ ಆಗಲೇ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಇದೀಗ, ಪೃಥ್ವಿರಾಜ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ನಾಲ್ವರು ಸಹಚರರು ಸಹ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳನ್ನ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.