
‘ಕೇಳಿ ಕಥೆಯ’ ಆಡಿಯೊ ಪುಸ್ತಕದ ಎರಡನೇ ಅವೃತ್ತಿ ಮಂಗಳವಾರ ಬಿಡುಗಡೆಯಾಗಿದೆ. ಒರಾಯನ್ ಮಾಲ್ ನಲ್ಲಿ ಸಾಹಿತಿ ವಸುಧೇಂದ್ರ, ನಟರಾದ ಕಿಶೋರ್, ವಸಿಷ್ಠ ಸಿಂಹ ಮತ್ತು ನಿರ್ದೇಶಕ ಬಿ ಸುರೇಶ ಆಡಿಯೊ ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಕಿಶೋರ್ ‘ನಾವೆಲ್ಲ ಕತೆ ಕೇಳಿ ಬೆಳೆದವರು. ಅದು ಕೇವಲ ಚಟುವಟಿಕೆಯಾಗದೇ ನಮ್ಮ ಜೀವನಕ್ರಮವಾಗಿತ್ತು. ಕಥೆಯ ಮೂಲಕ ಈ ನಾಡಿನ ಈ ಮಣ್ಣಿನ ಜೀವನ ಕ್ರಮಗಳು ದಾಖಲಾಗುತ್ತಿವೆ ಮತ್ತು ಮುಂದಿನ ಜನಾಂಗಕ್ಕೆ ದಾಟುತ್ತಿವೆ. ನಾನು ಓದಿರುವ ಕತೆ ನನ್ನ ಹೃದಯಕ್ಕೆ ಮತ್ತು ನನ್ನ ಬದುಕಿಗೆ ಬಹಳ ಹತ್ತಿರವಾದದ್ದು. ಇಂಥ ಪ್ರಯತ್ನದಲ್ಲಿ ಭಾಗಿಯಾಗಲು ಅವಕಾಶವಾದದ್ದು ನನಗೆ ತುಂಬ ಸಂತಸ ತಂದಿದೆ’ ಎಂದು ಹೇಳಿದ್ದಾರೆ
ಬಹಳ ಹಿಂದಿನಿಂದಲೂ ಜ್ಞಾನದ ಪ್ರಸಾರವು ಮೌಖಿಕ ಪರಂಪರೆಯನ್ನು ಅವಲಂಬಿಸಿದೆ. ಇಂದು ವಿವಿಧ ಕಾರಣಗಳಿಗಾಗಿ ಅದನ್ನೇ ಹೊಸ ತಾಂತ್ರಿಕತೆಯ ಸಹಾಯದಿಂದ ನೂತನ ಮಾದರಿಯಲ್ಲಿ ಬಳಸುವ ಅನಿವಾರ್ಯತೆ ಇದೆ. ಭಾಷೆಯನ್ನು ಬರೆಯಲು, ಓದಲು ಬಾರದ ಹೊಸ ಪೀಳಿಗೆಯ ಕನ್ನಡದ ಮಕ್ಕಳು, ದೃಷ್ಟಿ ಭಾಗ್ಯವಿಲ್ಲದ ಕನ್ನಡ ಸೋದರ, ಸೋದರಿಯರು ಮತ್ತು ಓದು ಬರಹ ಬಲ್ಲವರಾಗಿದ್ದೂ ಸಂಚಾರದಲ್ಲಿ ಹೆಚ್ಚು ಸಮಯ ಕಳೆಯುವ ಪ್ರೀತಿಯ ಕನ್ನಡಿಗರು ಇಂಥವರನ್ನು ತಲುಪುವಲ್ಲಿ ಇಂತಹ ಪ್ರಯತ್ನಗಳು ಇಂದಿನ ಅಗತ್ಯ ಮತ್ತು ಶ್ಲಾಘನೀಯ ಎಂದಿದ್ದಾರೆ ಸಾಹಿತಿ ವಸುಧೇಂದ್ರ.
ಬಿ. ಸುರೇಶ ಮಾತಾಡಿ ‘ನಮ್ಮ ಕನ್ನಡಲ್ಲಿ ಸಾವಿರಾರು ಕಥೆಗಳಿವೆ ಅದನ್ನು ನಾವು ಹೊಸ ರೂಪಾಂತರಗಳಿಗೆ ತಂದು ಎಲ್ಲರಿಗು ಮುಟ್ಟಿಸಬೇಕು, ಕೇಳಿ ಕಥೆಯ ಅದರ ನಿಟ್ಟಿನಲ್ಲಿ ಇನ್ನು ಹೆಚ್ಚು ಕಥೆಗಳನ್ನು ತರಬೇಕು ಎಂದು ಹೇಳಿದರು. ನಾನು ಕಥೆಗಳನ್ನು ನನ್ನ ಹಿರಿಯರ ಹತ್ತಿರ ಕೇಳುತ್ತಿದೆ. ಈಗಿನ ಮಕ್ಕಳಿಗೆ ಅದು ಸಾಧ್ಯವಾಗಲಿ ಎಂದು ಈ ಸಂಚಿಕೆಯಲ್ಲಿ ಕಥೆ ಹೇಳುವುದಕ್ಕೆ ಒಪ್ಪಿಕೊಂಡೆ ಎಂದು ನಟ ವಸಿಷ್ಠ ಸಿಂಹ ಹೇಳಿದ್ದಾರೆ.
ಕೇಳಿ ಕತೆಯ ಆಡಿಯೊ ಪುಸ್ತಕ- ಏನಿದು?
ಕೇಳಿ ಕತೆಯ ಆಡಿಯೊ ಪುಸ್ತಕವು ವಿಶಿಷ್ಟ ಯೋಜನೆ ಯಾಗಿದ್ದು ಇಲ್ಲಿ ಖ್ಯಾತ ಕನ್ನಡ ಸಾಹಿತಿಗಳ ಅತ್ಯುತ್ತಮ ಕತೆಗಳಿಗೆ ಚಿತ್ರರಂಗದ ಸುಪ್ರಸಿದ್ದ ನಟರು ದನಿಯಗಿದ್ದಾರೆ. 2014 ರಲ್ಲಿ ಕೇಳಿ ಕತೆಯ ಮೊದಲ ಅವೃತ್ತಿ ಸಿಡಿ ರೂಪದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಅವೃತ್ತಿಯಲ್ಲಿ ಕುವೆಂಪು, ಚಿತ್ತಾಲ, ಬೋಳುವಾರು, ದೇವನೂರು ಮಹಾದೇವ, ಕೆ.ವಿ.ತಿರುಮಲೇಶ್, ವಿವೇಕ್ ಶಾನಭಾಗ ಅವರ ಕಥೆಗಳಿವೆ. ಈ ಕತೆಗಳಿಗೆ ಚಿತ್ರರಂಗದ ಖ್ಯಾತ ಕಲಾವಿದರಾದ ಧನಂಜಯ್, ಅಚ್ಯುತ್ ಕುಮಾರ್, ರಾಜ್ ಶೆಟ್ಟಿ, ಗಿರಿಜಾ ಲೋಕೇಶ್, ವಸಿಷ್ಟ ಸಿಂಹ, ಶ್ರುತಿ ಹರಿಹರನ್ ದನಿಯಾಗಿದ್ದಾರೆ.
ಈ ಕತೆಗಳನ್ನು ಕೇಳಲು www.kelikatheya.com ಗೆ ಭೇಟಿ ನೀಡಿ, ಅಲ್ಲಿಂದ ಕತೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆಡಿಯೋ ಕತೆಗಳ ಮಾರಾಟದಿಂದ ಬರುವ ಸಂಪೂರ್ಣ ಲಾಭವನ್ನು ಗಡಿನಾಡ ಕನ್ನಡ ಶಾಲೆಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಪ್ರತಿಷ್ಠಾನದ ಮೂಲಕ ಮೀಸಲಿಡಲಾಗುವುದು ಎಂದು ‘ಕೇಳಿ ಕಥೆಯ’ ತಂಡ ಹೇಳಿದೆ.
Published On - 8:12 pm, Tue, 8 December 20