ರಾಮನಗರ: ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರದ ನಿರ್ಧಾರ
ಮಾವು ಬೆಳೆಯಲ್ಲಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೂ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಮಾವು ಸಂಸ್ಕರಣಾ ಘಟಕಗಳಿರಲಿಲ್ಲ. ಕೊನೆಗೂ ಸರ್ಕಾರ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ರಾಮನಗರ: ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಜಿಲ್ಲೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದ್ದು, ಸಂಸ್ಕರಣಾ ಘಟಕ ಸ್ಥಾಪನೆಗೆ 15 ಎಕರೆ ಭೂಮಿ ನೀಡುವುದಾಗಿ ಸರ್ಕಾರ ಹೇಳಿದೆ.
ಮಾವು ಬೆಳೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಆದರೆ ಇಲ್ಲಿಯವರೆಗೆ ಮಾವು ಸಂಸ್ಕರಣಾ ಘಟಕಗಳಿರಲಿಲ್ಲ. ಹಲವು ವರ್ಷಗಳಿಂದ ಸಂಸ್ಕರಣಾ ಘಟಕದ ಬಗ್ಗೆ ಮಾತುಗಳು ಬರುತ್ತಿತ್ತು. ಇದೀಗ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿಯ ಹತ್ತಿರದಲ್ಲಿ ಇರುವ ತೋಟಗಾರಿಕಾ ಇಲಾಖೆಗೆ ಸೇರಿದ 15 ಎಕರೆ ಭೂಮಿ ನೀಡುವುದಾಗಿ ಹೇಳಿದೆ.
ರಾಜ್ಯದಲ್ಲಿ ಎಲ್ಲಿಯೂ ಬೃಹತ್ ಮಾವು ಸಂಸ್ಕರಣ ಘಟಕ ಇಲ್ಲ. ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಆಗುತ್ತಿರುವುದು ಜಿಲ್ಲೆಯ ರೈತರ ಸಂತಸಕ್ಕೆ ಕಾರಣವಾಗಿದೆ. ಹಾಗೂ ರೈತರಿಗೆ ಉತ್ತಮ ಬೆಲೆ ಕಲ್ಪಿಸಲು ನೆರವಾಗುತ್ತದೆ. ಪ್ರತಿ ವರ್ಷ ಬರ, ಮಳೆ, ಬೆಲೆ ಕುಸಿತದಿಂದಾಗಿ ಒಂದಿಲ್ಲೊಂದು ಕಾರಣಕ್ಕೆ ಮಾವು ಬೆಳೆಗಾರರು ತೊಂದರೆ ಅನುಭವಿಸುತ್ತಲೇ ಬಂದಿದ್ದರು.
ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್ಗಳಷ್ಟು ಇಳುವರಿ, ₹ 400 ಕೋಟಿ ವಹಿವಾಟು ನಡೆಯುತ್ತಿದೆ. ಒಟ್ಟು ಉತ್ಪನ್ನದಲ್ಲಿ 50 ಸಾವಿರ ಟನ್ ಹಣ್ಣು ಸಂಸ್ಕರಣೆಗೆ ಸಿಗಲಿದೆ.
ಮಾವಿನ ಕಾಲದಲ್ಲಿ ಮಾವು ಸಂಸ್ಕರಣೆ ಮಾಡಿ ಉಳಿದ ದಿನಗಳಲ್ಲಿ ಬಾಳೆ, ಚಿಕ್ಕು, ಪಪ್ಪಾಯ, ನೀಲಿದ್ರಾಕ್ಷಿ ಹಣ್ಣುಗಳ ಸಂಸ್ಕರಣೆ ಹಾಗೂ ಎಳನೀರಿನ ಟೆಟ್ರಾ ಪ್ಯಾಕ್ ಸಿದ್ಧಪಡಿಸಲು ಘಟಕವನ್ನು ಬಳಸಿಕೊಳ್ಳವ ಯೋಚನೆ ಇದೆ.