ದೆಹಲಿ: ಮೈಸೂರು ಮೇಯರ್ ಆಯ್ಕೆ ಸಂಬಂಧ ತೀವ್ರವಾಗಿ ಅಸಮಾಧಾನಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರ ಮನವೊಲಿಕೆಗೆ ಇಂದು ಎಐಸಿಸಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಯತ್ನಿಸಿದರು. ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಪುತ್ರನ ವಿವಾಹದಲ್ಲಿ ಭಾಗಿಯಾದ ಸಿದ್ದರಾಮಯ್ಯರ ಮನವೊಲಿಸಲು ವೇಣುಗೋಪಾಲ್ ಮುಂದಾದರು.
ರಣದೀಪ್ ಸಿಂಗ್ ಸುರ್ಜೆವಾಲ ಅವರ ಪುತ್ರ ಅರ್ಜುನ್ ಮತ್ತು ಐಶ್ವರ್ಯ ವಿವಾಹ ಸಮಾರಂಭದಲ್ಲಿ ಭಾಗಿಯಾದ ಸಿದ್ದರಾಮಯ್ಯ ನವಜೋಡಿಗೆ ಶುಭಹಾರೈಸಿ ವೇದಿಕೆಯಿಂದ ಕೆಳಗಿಳಿದು ಬಂದರು. ಈ ವೇಳೆ, ಅವರನ್ನು ಭೇಟಿಯಾದ ವೇಣುಗೋಪಾಲ್ ಸಿದ್ದರಾಮಯ್ಯರನ್ನು ತಬ್ಬಿಕೊಂಡು ಮನವೊಲಿಕೆಗೆ ಪ್ರಯತ್ನಿಸಿದರು.
ಹೋಟೆಲ್‌ನಲ್ಲಿ ಸಿದ್ದರಾಮಯ್ಯ ಜೊತೆ ವೇಣುಗೋಪಾಲ್ ಚರ್ಚೆ ಸಹ ನಡೆಸಲು ಮುಂದಾದರು. ಮೇಯರ್ ಆಯ್ಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ವರಿಷ್ಠರು ಗಂಭೀರವಾಗಿ ಪರಿಗಣಿಸ್ತಾರೆ ಎಂದು ವೇಣುಗೋಪಾಲ್ ವಿಪಕ್ಷ ನಾಯಕನಿಗೆ ಭರವಸೆ ನೀಡಿದರು. ಆದರೆ, ಕೆ.ಸಿ.ವೇಣುಗೋಪಾಲ್‌ಗೆ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ಅಲ್ಲಿಂದ ಸುಮ್ಮನೇ ತೆರಳಿದರು ಎಂದು ಮೂಲಗಳು ತಿಳಿಸಿದೆ.
ಮೈಸೂರು ಪ್ರವಾಸ ರದ್ದುಗೊಳಿಸಿದ ಸಿದ್ದರಾಮಯ್ಯ
ಇತ್ತ, ಸಿದ್ದರಾಮಯ್ಯ ತಮ್ಮ ಮೈಸೂರು ಪ್ರವಾಸ ರದ್ದುಪಡಿಸಿದ್ದಾರೆ. ನಾಳೆ ಸಿದ್ದರಾಮಯ್ಯರ ಮೈಸೂರು ಪ್ರವಾಸ ನಿಗದಿಯಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮೈಸೂರು ಪ್ರವಾಸ ರದ್ದುಪಡಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ನಡುವೆ, ಮೈಸೂರು ಮೇಯರ್ ಆಯ್ಕೆಯ ವಿಚಾರದ ಲ್ಲಿ ವಿವಾದದ ಕೇಂದ್ರಬಿಂದುವಾಗಿರುವ ಶಾಸಕ ತನ್ವೀರ್ ಸೇಠ್ ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿಗೆ ತನ್ವೀರ್ ಸೇಠ್ ಆಗಮಿಸಲಿದ್ದಾರೆ.
ಶಾಸಕ ಜಮೀರ್ ಅಹ್ಮದ್ಗೆ ವೇಣುಗೋಪಾಲ್ ಬುಲಾವ್
ಇತ್ತ, ಕಾಂಗ್ರೆಸ್ನಲ್ಲಿನ ಮುಸ್ಲಿಂ ನಾಯಕರ ನಡುವಿನ ಒಳಜಗಳ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ಗೆ ವೇಣುಗೋಪಾಲ್ ಬುಲಾವ್ ನೀಡಿದರು. ದೆಹಲಿಯ ನಿವಾಸಕ್ಕೆ ಕರೆಸಿಕೊಂಡು ಜಮೀರ್ ಜೊತೆ ಚರ್ಚೆ ನಡೆಸಿದರು.
ರಣದೀಪ್ ಸಿಂಗ್ ಪುತ್ರನ ಮದುವೆಗೆ ಆಗಮಿಸಿದ್ದ ಜಮೀರ್ ಅವರನ್ನು ತಮ್ಮ ಮನೆಗೆ ಬಂದು ಭೇಟಿ ಆಗಲು ಕೆಸಿವಿ ಸೂಚಿಸಿದರು. ಕೆ.ಸಿ.ವೇಣುಗೋಪಾಲ್ ನಿವಾಸಕ್ಕೆ ತೆರಳಿದ ಜಮೀರ್ ತಮ್ಮ ಹಾಗೂ ತನ್ವೀರ್ ಸೇಠ್ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಚರ್ಚೆ ಮಾಡಿದರು.
Published On - 6:35 pm, Sun, 28 February 21