ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ನಡುಗಡ್ಡೆಯೊಂದರಲ್ಲಿ ಸಿಲುಕಿ ನಾಲ್ಕು ಕುರಿಗಾಹಿಗಳು ಪರದಾಡುತ್ತಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಾರಲಗಡ್ಡಿ ಎಂಬ ನಡುಗಡ್ಡೆಯಲ್ಲಿ ಬೆಳಕಿಗೆ ಬಂದಿದೆ.
ಹಾರಲಗಡ್ಡಿಯಲ್ಲಿ ಸಿಲುಕಿರುವ ಕುರಿಗಾಹಿಗಳು ಕುರಿಗಳ ಸಮೇತವಾಗಿ ನದಿ ದಂಡೆಗೆ ಬಂದು ತಮ್ಮನ್ನ ರಕ್ಷಿಸಲು ಕೂಗಾಡುತ್ತಿದ್ದಾರೆ. ಇತ್ತ ನದಿಯ ಈ ಬದಿಯಿಂದ ಕುರಿಗಾಹಿಗಳ ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಮೊರೆ ಇಡುತ್ತಿದ್ದಾರೆ. ಆದರೆ, ಕುರಿಗಾಹಿಗಳ ರಕ್ಷಣೆಗೆ ಯಾವ ಅಧಿಕಾರಿಯು ಬಾರದ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಬಸವ ಸಾಗರ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಇದರ ಪರಿಣಾಮವಾಗಿ ಅದೇ ಲಿಂಗಸಗೂರು ತಾಲೂಕಿನ ಮ್ಯಾದರಗಡ್ಡೆ ಗ್ರಾಮದ ಬಳಿ ಕುರಿಗಳನ್ನ ಕರೆತರಲು ಹೋದ11 ಮಂದಿ ಸಿಲುಕಿಕೊಂಡಿದ್ದಾರೆ. ಪ್ರವಾಹದಲ್ಲಿ ಮಕ್ಕಳು ಸೇರಿದಂತೆ 11 ಜನರು ಸಿಲುಕಿರುವ ಮಾಹಿತಿ ದೊರೆತಿದೆ.