
ರಾಯಚೂರು: ಮಸ್ಕಿ ಉಪಚುನಾವಣೆಯ ದಿನಾಂಕ ಇನ್ನೂ ಘೋಷಣೆಯಾಗದಿದ್ದರೂ ಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಶುರುವಾಗಿದೆ. ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದು ಅದಕ್ಕೆ ಸಾಕ್ಷಿಯಂತಿತ್ತು.
ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಜನರಿಗೆ ಮೋಸ ಮಾಡಿದ್ದಾರೆ. ಪ್ರತಾಪ್ ಗೌಡ ಗೆಲ್ಲುವ ಕುದುರೆ ಎಂದು ಜಿಲ್ಲಾ ಮುಖಂಡರು ಹೇಳಿದ್ದರು. ಆದರೆ ಅವರೊಬ್ಬ ಚೆಂಗುಲಿ ಕುದುರೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ನೀವೆಲ್ಲ ಬಿಜೆಪಿ ಆಮಿಷಗಳಿಗೆ ಒಳಗಾಗದೆ ಪ್ರತಾಪ್ ಗೌಡ ಪಾಟೀಲ್ಗೆ ತಕ್ಕ ಪಾಠ ಕಲಿಸಿ ಎಂದು ಮಸ್ಕಿ ಜನರಿಗೆ ಸಿದ್ದರಾಮಯ್ಯ ಹೇಳಿದರು. ಬಿಜೆಪಿಯಲ್ಲಿದ್ದ ಪ್ರತಾಪ್ ಗೌಡನನ್ನು ಜಿಲ್ಲಾ ಮುಖಂಡರು ಕಾಂಗ್ರೆಸ್ಗೆ ಕರೆತಂದರು, ನಾವೂ ನಂಬಿ ಸೇರಿಸಿಕೊಂಡೆವು. ಆದರೆ ನಂತರ ಕಾಂಗ್ರೆಸ್ಗೆ ಚೂರಿ ಹಾಕಿ ಬಿಜೆಪಿಗೆ ಸೇರ್ಪಡೆಯಾದರು ಎಂದು ಕಟುವಾಗಿ ಟೀಕಿಸಿದರು.
ಪಕ್ಷಾಂತರಿಗಳು ಜನದ್ರೋಹಿಗಳಿಗೆ ಮಾನ-ಮರ್ಯಾದೆ ಇಲ್ಲ. ಹಿಂದುಳಿದ ಮಸ್ಕಿ ಕ್ಷೇತ್ರಕ್ಕೆ ನಾನು 7,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೆ. ಇಲ್ಲಿ ಅಭಿವೃದ್ಧಿಯಾಗಿರುವುದು ಕಾಂಗ್ರೆಸ್ ಕೊಟ್ಟ ಹಣದಿಂದ. ಆದರೆ, ಪ್ರತಾಪ್ ಗೌಡ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ನಂತರ ಬಿಜೆಪಿಗೆ ಓಡಿ ಹೋಗಿ ಕಾರಣ ಕೇಳಿದ್ದಕ್ಕೆ ಒತ್ತಡ ಎಂದು ಹೇಳಿದರು. ಅವರಿಗೆ ಯಾವ ಒತ್ತಡವೂ ಇರಲಿಲ್ಲ. ಹಣದಾಸೆಗೆ ತನ್ನನ್ನು ತಾನು ಮಾರಾಟ ಮಾಡಿಕೊಂಡರಷ್ಟೇ. ಕುರಿ, ಮೇಕೆ, ದನಗಳನ್ನು ಸಂತೆಗಳಲ್ಲಿ ನಾವೆಲ್ಲಾ ಮಾರುತ್ತೇವೆ. ಆದ್ರೆ ಈ ಗಿರಾಕಿ ಶಾಸಕನಾಗಿ ಮಾರಾಟವಾಗಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಬಸಣಗೌಡ ಕಾಂಗ್ರೆಸ್ ಸೇರ್ಪಡೆ
ಇದೇ ವೇಳೆ ಸಮಾವೇಶದಲ್ಲಿ ಬಸಣಗೌಡ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬಂದಿದ್ದಾರೆ. ಅವರು ಕಾಂಗ್ರೆಸ್ ಸಂಘಟನೆ ಮಾಡುತ್ತಾರೆಂಬ ನಂಬಿಕೆ ಇದೆ. ನೀವೆಲ್ಲ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷರು, ನಾನು ಸೇರಿ ಚರ್ಚಿಸಿ, ಬಸಣಗೌಡರನ್ನೇ ಮಸ್ಕಿ ಅಭ್ಯರ್ಥಿಯನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದರು.