ಯಮರೂಪದಲ್ಲಿ ಬಂದ ಸರ್ಪ.. ವ್ಯರ್ಥವಾಯ್ತು ಅಮ್ಮನ ಹೋರಾಟ; ಉಳಿಯಲೇ ಇಲ್ಲ ನಾಲ್ಕು ಜೀವಗಳು

| Updated By: ಸಾಧು ಶ್ರೀನಾಥ್​

Updated on: Dec 14, 2020 | 11:13 AM

ಒಂದೆರಡು ಬಾರಿ ನಾಗರ ಹಾವನ್ನು ಓಡಿಸಲು ತಾಯಿ ಮೊಲ ಯಶಸ್ವಿಯಾದರೂ ಹಸಿದಿದ್ದ ಹಾವು ಮಾತ್ರ ಮತ್ತೆ ಬಂದು ಮರಿಗಳಿಗೆ ಕಚ್ಚಿದೆ. ಕೂಡಲೇ ಸಿಟ್ಟಿಗೆದ್ದ ತಾಯಿ ಮೊಲ ಹಾವನ್ನು ಕಚ್ಚಿ ಅಲ್ಲಿಂದ ಓಡಿಸಿದೆ. ಅಷ್ಟೊತ್ತಿಗೆ ನಾಲ್ಕೂ ಮರಿಗಳ ದೇಹದಲ್ಲಿ ಹಾವಿನ ವಿಷ ಏರಿ, ಅವೆಲ್ಲಾ ಸತ್ತು ಹೋಗಿವೆ.

ಯಮರೂಪದಲ್ಲಿ ಬಂದ ಸರ್ಪ.. ವ್ಯರ್ಥವಾಯ್ತು ಅಮ್ಮನ ಹೋರಾಟ; ಉಳಿಯಲೇ ಇಲ್ಲ ನಾಲ್ಕು ಜೀವಗಳು
ತಾಯಿ ಮೊಲ, ನಾಗರಹಾವು ಮತ್ತು ಪ್ರಾಣಬಿಟ್ಟ ಮೊಲದ ಮರಿಗಳು
Follow us on

ಧಾರವಾಡ: ಅದೊಂದು ಸುಂದರ ಕುಟುಂಬ.. ಆ ಕುಟುಂಬದಲ್ಲಿ ತಾಯಿ ಮತ್ತು ನಾಲ್ಕು ಮಕ್ಕಳು ನೆಮ್ಮದಿಯಾಗಿದ್ದರು. ಆದರೆ ಅದೇಕೋ ವಿಧಿಗೆ ಈ ಕುಟುಂಬದ ನೆಮ್ಮದಿಯನ್ನು ನೋಡಲು ಸಾಧ್ಯವಾಗಲಿಲ್ಲ ಅನ್ನಿಸುತ್ತದೆ. ಇದೇ ಕಾರಣಕ್ಕೆ ನಾಗರ ಹಾವೊಂದು ಯಮನ ರೂಪದಲ್ಲಿ ಬಂದು, ನಾಲ್ಕು ಮಕ್ಕಳನ್ನು ಕಿತ್ತುಕೊಂಡಿದೆ. ಇದೆಲ್ಲ ನಡೆದಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದ ಸುನಿಲ್ ಹೆಬ್ಬಳ್ಳಿ ಎಂಬುವವರ ತೋಟದ ಮನೆಯಲ್ಲಿ.

ಸುನಿಲ್ ಹೆಬ್ಬಳ್ಳಿ ಪ್ರೀತಿಯಿಂದ ಕೆಲವು ಮೊಲಗಳನ್ನು ಸಾಕಿದ್ದಾರೆ. ತೋಟದ ಮನೆಯಲ್ಲಿ ಈ ಮೊಲಗಳು ಓಡಾಡಿಕೊಂಡು ಇದ್ದರೆ ಅದನ್ನು ನೋಡಿ ಸುನಿಲ್ ಕುಟುಂಬ ಖುಷಿಪಡುತ್ತಿತ್ತು. ಮೊಲಗಳ ತುಂಟಾಟ, ಚಿನ್ನಾಟ ತೋಟದ ಮನೆಗೆ ನೆಮ್ಮದಿ ತಂದಿತ್ತು.

ಇತ್ತೀಚಿಗಷ್ಟೇ ಈ ಎಲ್ಲ ಮೊಲಗಳ ಪೈಕಿ ಒಂದು ಜೋಡಿಗೆ ನಾಲ್ಕು ಮರಿಗಳು ಹುಟ್ಟಿದವು. ಒಂದು ವಾರದ ಮರಿಗಳು ಈಗಷ್ಟೇ ಕಣ್ಣು ತೆರೆದು ಓಡಾಡೋ ಹಂತಕ್ಕೆ ಬಂದಿದ್ದವು. ಅವುಗಳ ರಕ್ಷಣೆಯಲ್ಲಿಯೇ ತಾಯಿ ಮೊಲ ಕಾಲ ಕಳೆಯುತ್ತಿತ್ತು. ಒಂದರೆಕ್ಷಣವೂ ಮರಿಗಳನ್ನು ಬಿಟ್ಟು ಅತ್ತಿತ್ತ ಕದಲುತ್ತಿರಲಿಲ್ಲ.

ತಾಯಿ ಮೊಲದ ಆರೈಕೆ ಮಾಡುತ್ತಿದ್ದ ಸುನಿಲ್ ಮೊಲದ ಇದ್ದಲ್ಲಿಗೇ ಹೋಗಿ ಆಹಾರ ನೀಡುತ್ತಿದ್ದರು. ಇನ್ನೇನು ಕೆಲ ದಿನಗಳಲ್ಲಿ ಮರಿಗಳೆಲ್ಲಾ ಮನೆ ತುಂಬಾ ಓಡಾಡುತ್ತವೆ ಎನ್ನುತ್ತಿರುವಾಗಲೇ ಘೋರ ಘಟನೆಯೊಂದು ನಡೆದಿದೆ. ಅದು ನಾಗರಾಜನ ರೂಪದಲ್ಲಿ ಬಂದು ಇಡೀ ಕುಟುಂಬದ ನೆಮ್ಮದಿಯನ್ನೇ ನುಂಗಿ ಹಾಕಿದೆ.

ತೋಟದ ಮನೆಯ ಮೂಲೆಯಲ್ಲಿ ತನ್ನ ಮರಿಯೊಂದಿಗೆ ಮೊಲ ಮಲಗಿರುವಾಗ ನಾಗರ ಹಾವೊಂದು ಎಂಟ್ರಿ ಕೊಟ್ಟಿದೆ. ಮರಿಗಳ ವಾಸನೆಯನ್ನು ಹಿಡಿದು ಬಂದ ನಾಗರಹಾವಿಗೆ ಅಲ್ಲಿ ತಾಯಿ ಮೊಲ ಇರೋದು ಗೊತ್ತೇ ಆಗಿಲ್ಲ. ಯಾವಾಗ ನಾಗರ ಹಾವು ಬಂತೋ ಕೂಡಲೇ ತಾಯಿ ಮೊಲ ರೊಚ್ಚಿಗೆದ್ದಿದೆ. ಅದನ್ನು ಓಡಿಸಲು ಹರಸಾಹಸ ಮಾಡಿದೆ.

ಒಂದೆರಡು ಬಾರಿ ನಾಗರ ಹಾವನ್ನು ಅಲ್ಲಿಂದ ಓಡಿಸಲು ತಾಯಿ ಮೊಲ ಯಶಸ್ವಿಯಾದರೂ ಹಸಿದಿದ್ದ ನಾಗರ ಹಾವು ಮಾತ್ರ ಅದಕ್ಕೆ ಬಗ್ಗಲೇ ಇಲ್ಲ. ಮತ್ತೆ ಮರಿಗಳ ಬಳಿ ಬಂದು, ಎಲ್ಲ ಮರಿಗಳಿಗೆ ಕಚ್ಚಿದೆ. ಕೂಡಲೇ ಸಿಟ್ಟಿಗೆದ್ದ ತಾಯಿ ಮೊಲ ಹಾವನ್ನು ಕಚ್ಚಿ ಅಲ್ಲಿಂದ ಓಡಿಸಿದೆ. ಕಷ್ಟಪಟ್ಟು, ಜೀವದ ಹಂಗು ತೊರೆದು ತಾಯಿ ಮೊಲ ಹಾವನ್ನೇನೋ ಓಡಿಸಿತು. ಆದರೆ ಅದರ ಅದೃಷ್ಟ ಸರಿ ಇರಲಿಲ್ಲ. ಅಷ್ಟೊತ್ತಿಗೆ ನಾಲ್ಕೂ ಮರಿಗಳ ದೇಹದಲ್ಲಿ ಹಾವಿನ ವಿಷ ಏರಿ, ಅವೆಲ್ಲಾ ಸತ್ತು ಹೋಗಿವೆ.

ಅತ್ತ ನಾಗರ ಹಾವಿನ ಹೊಟ್ಟೆಯೂ ತುಂಬಲಿಲ್ಲ, ಇತ್ತ ತಾಯಿಯ ಹೊಟ್ಟೆಯೂ ತಣ್ಣಗಾಗಲಿಲ್ಲ. ತನ್ನ ಜೀವದ ಹಂಗು ತೊರೆದು ಹಾವಿನ ಬಾಯಿಗೆ ಸಿಗದೇ ಹೋರಾಡಿದ ತಾಯಿ ಮೊಲಕ್ಕೆ ಕೊನೆಗೂ ತನ್ನ ಮರಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ಅನ್ನೋದೇ ಬೇಸರದ ಸಂಗತಿ.
-ನರಸಿಂಹಮೂರ್ತಿ ಪ್ಯಾಟಿ

Published On - 6:14 am, Mon, 14 December 20