ಗ್ರಾ.ಪಂ. ಚುನಾವಣೆಯಲ್ಲಿ ಫೇಸ್ಬುಕ್ ಹವಾ: ಕೋಟೆನಾಡಿನಲ್ಲಿ ಹಳ್ಳಿಹಕ್ಕಿಗಳ ಪೋಸ್ಟ್ ಕಮೆಂಟ್ ಅಬ್ಬರ
ಚಿತ್ರದುರ್ಗ, ಹಿರಿಯೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾ.ಪಂ.ಗಳಲ್ಲಿ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಚಿತ್ರದುರ್ಗ: ಕಳೆದ ಕೆಲ ವರ್ಷಗಳಿಂದ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಂತೂ ಸೋಷಿಯಲ್ ಮೀಡಿಯಾಗಳದ್ದೇ ಹವಾ. ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಖಾತೆ ಹೊಂದುವುದು ರಾಷ್ಟ್ರೀಯ ಪಕ್ಷಗಳಲ್ಲಿ ಕಡ್ಡಾಯ. ನರೇಂದ್ರ ಮೋದಿಯವರು ಪ್ರಧಾನಿ ಪಟ್ಟವೇರಲು ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯೂ ಕಾರಣ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸತ್ಯ. ಇದೀಗ, ಗ್ರಾಮ ಪಂಚಾಯತಿ ಕಣದಲ್ಲೂ ಸಾಮಾಜಿಕ ಜಾಲತಾಣಗಳು ಸದ್ದು ಮಾಡುತ್ತಿವೆ.
ಆನ್ಲೈನ್ನಲ್ಲೇ ಮತದಾರರ ಓಲೈಕೆ.. ಚಿತ್ರದುರ್ಗ, ಹಿರಿಯೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾ.ಪಂ.ಗಳಲ್ಲಿ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮತದಾರರ ಓಲೈಕೆ, ಬಲಾಬಲ, ಜನಪ್ರಿಯತೆ ಅಳೆಯಲು, ಎದುರಾಳಿ ಕುರಿತು ತಿಳಿಯಲು ಅಭ್ಯರ್ಥಿಗಳು ಫೇಸ್ಬುಕ್ ಬಳಕೆ ಹೆಚ್ಚಿಸಿದ್ದಾರೆ. ಬೆಂಬಲಿಗರು ಲೈಕ್, ಕಮೆಂಟ್ ಮೂಲಕ ಪ್ರೋತ್ಸಾಹ ನೀಡುತ್ತಿದ್ದರೆ ಎದುರಾಳಿಗಳು ಟಾಂಗ್ ನೀಡುತ್ತಿದ್ದಾರೆ.
ಗೆದ್ದವರು ಏನು ಮಾಡಿದ್ದಾರೆ? ಕಳೆದ ಬಾರಿ ಗ್ರಾಮ ಪಂಚಾಯತಿ ಸದಸ್ಯರಾದವರು ಮಾಡಿದ ಕೆಲಸಗಳೇನು? ಗ್ರಾಮ ಅಭಿವೃದ್ಧಿಯಾಗಿದೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭ್ರಷ್ಟರನ್ನು ಮರು ಆಯ್ಕೆ ಮಾಡದೆ ಯುವಕರಿಗೆ ಅವಕಾಶ ಕಲ್ಪಿಸುವಂತೆ ಗ್ರಾಮಸ್ಥರು ಪೋಸ್ಟ್ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಬ್ಬೂರು ಗ್ರಾ.ಪಂ ವಾರ್ಡ್ ನಂಬರ್ -2ರಲ್ಲಿ ಕಣಕ್ಕಿಳಿಯಬಯಸಿರುವ ಪುನೀತ್, ‘ಈಗಾಗಲೇ ಫೇಸ್ಬುಕ್ ಮೂಲಕ ಕಣಕ್ಕಿಳಿಯುವುದಾಗಿ ಘೋಷಿಸಿಕೊಂಡಿದ್ದೇನೆ. ಮನೆಮನೆಗೆ ಪ್ರಚಾರಕ್ಕೆ ತೆರಳುವ ಮುನ್ನವೇ ನಾನು ಕಣಕ್ಕಿಳಿಯಲಿದ್ದೇನೆ ಎಂದು ನಮ್ಮೂರಿನ ಜನರಿಗೆ ತಿಳಿಯಿತು. ಗ್ರಾಮ ಅಭಿವೃದ್ಧಿ, ನನ್ನ ಗುರಿ ಬಗ್ಗೆಯೂ ಜನರಿಗೆ ವೇಗವಾಗಿ ತಿಳಿಸಲು ಸಾಮಾಜಿಕ ಜಾಲತಾಣ ಬಳಸುತ್ತಿದ್ದೇನೆ’ ಎಂದು ಹೇಳಿದರು.