ರಾಯಚೂರು: ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಮಹಿಳೆ ಕಿವಿ ಕಟ್ ಮಾಡಿರುವ ಘಟನೆ ಕುಕನೂರು ಗ್ರಾಮದಲ್ಲಿ ನಡೆದಿದೆ. ಹನುಮಂತರಾಯ ಮನೆಗೆ ಕಳ್ಳತನಕ್ಕೆ ಬಂದಿದ್ದ ಮೂವರು ಕಿರಾತಕರು ಕಳ್ಳತನಕ್ಕೆ ಮಹಿಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕಿವಿ ಕತ್ತರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಗ್ರಾಮದಲ್ಲಿ ಭಾರಿ ಮಳೆ ಸುರಿದ ಪರಿಣಾಮ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಮೂವರು ಖದೀಮರು ಕಳ್ಳತನಕ್ಕೆ ಬಂದಿದ್ದರು. ಹನುಮಂತರಾಯನ ಮನೆಯಲ್ಲಿ ನಗದು, ಚಿನ್ನಾಭರಣ ಕದ್ದಿದ್ದಾರೆ. ಈ ವೇಳೆ ಅವರ ಕೃತ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮಹಿಳೆಯ ಕಿವಿ ಕತ್ತರಿಸಿ ಪರಾರಿಯಾಗಿದ್ದಾರೆ. ಆದರೆ ಮೂವರ ಪೈಕಿ ಒಬ್ಬ ಖದೀಮ ಸಿಕ್ಕಿಬಿದ್ದಿದ್ದು, ಆರೋಪಿ ಮನೋಜ್‌ನನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮರಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ. ಬಳಿಕ ಆರೋಪಿ ಮನೋಜ್‌ನನ್ನು ಗ್ರಾಮೀಣ ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಗಾಯಗೊಂಡಿರುವ ಮಹಿಳೆಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.