ಮಂಡ್ಯ: ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ, ರಾಗಿ ಮಾರಾಟದಿಂದ ರೈತನಿಗೆ ಸಿಗಬೇಕಾದ 1.20 ಲಕ್ಷ ಹಣ ಬೇರೊಬ್ಬರ ಖಾತೆಗೆ ಜಮಾವಣೆ ಆಗಿದ್ದು, ತನ್ನ ಪಾಲಿನ ಹಣ ಸಿಗದೇ ರೈತ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಬಸವನಗುಡಿ ಕೊಪ್ಪಲು ಗ್ರಾಮದ ದೊಡ್ಡೇಗೌಡ ಎಂಬುವವರು ರಾಜ್ಯ ಉಗ್ರಾಣ ನಿಗಮದಿಂದ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ 2019-20 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ 38 ರಾಗಿಯನ್ನು ಮಾರಾಟ ಮಾಡಿದ್ದಾರೆ.
ರಾಗಿ ಮಾರಾಟದ ಹಣ ಜಮಾವಣೆಗಾಗಿ ದೊಡ್ಡೇಗೌಡರು ಸೂಕ್ತ ದಾಖಲೆಯನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದು, ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತನಿಗೆ ಬರಬೇಕಾದ ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ.
ಹಣ ಸಿಗದೆ ಕಚೇರಿಯಿಂದ ಕಚೇರಿಗೆ ರೈತನ ಅಲೆದಾಟ
ಹೀಗಾಗಿ ಹಲವು ದಿನ ಕಳೆದರೂ ಹಣ ಕೈಸೇರದಿದ್ದಾದಗ ಕಂಗಾಲಾದ ರೈತ ಬ್ಯಾಂಕ್ನಲ್ಲಿ ಬಂದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. 1,20,612 ರೂ ಹಣ ಸಾಕಮ್ಮ ಎಂಬ ಮಹಿಳೆ ಖಾತೆಗೆ ವರ್ಗಾವಣೆಯಾಗಿದ್ದು, ತನ್ನ ಪಾಲಿನ ಹಣವನ್ನು ತನಗೆ ಕೊಡಿಸುವಂತೆ ರೈತ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ಅಲೆದಾಡಿದರೂ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿ ರೈತನನ್ನು ಕಳುಹಿಸುತ್ತಿದ್ದಾರೆ. ಇದರಿಂದಾಗಿ ಹಣ ಸಿಗದೆ ರೈತ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ.