ಬೆಂಗಳೂರು: ಬೆಳ್ಳಂಬೆಳ್ಳಗೆ ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದೆ. ಸತತ ಮಳೆಯಿಂದ ಲಗ್ಗೆರೆಯ ಪ್ರೀತಿನಗರದಲ್ಲಿ ರಸ್ತೆ ಕುಸಿತವಾಗಿದೆ. ಭೂಮಿಯನ್ನು ಅಗೆದು ಪೈಪ್‌ಲೈನ್ ಅಳವಡಿಸಲಾಗಿತ್ತು. ಮಣ್ಣು ಸರಿಯಾಗಿ ಹಾಕದ ಹಿನ್ನೆಲೆಯಲ್ಲಿ ಭೂಮಿ ಕುಸಿದಿದ್ದು, ಮಣ್ಣಿನಲ್ಲಿ ಕಾರು, ಬೈಕು, ಆಟೋ ಸೇರಿ ಹಲವು ವಾಹನಗಳು ಸಿಲುಕಿವೆ.
ಭಾರಿ ಮಳೆ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮರಗಳು ಧರೆಗುರುಳಿವೆ. ಕಾವೇರಿ ಚಿತ್ರಮಂದಿರದ ಸರ್ಕಲ್ನಲ್ಲಿ ಲಾರಿ ಮೇಲೆ ಮರದ ಬೃಹತ್ ಕೊಂಬೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರದ ಕೊಂಬೆ ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಗ್ಗದ ಸಹಾಯದಿಂದ ಮರದ ಕೊಂಬೆಯನ್ನು ತೆರವುಗೊಳಿಸಿದ್ದಾರೆ.
ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲೂ ಸಹ ಸಣ್ಣ ಮರವೊಂದು ನೆಲಕ್ಕುರುಳಿದೆ. ಯಶವಂತಪುರ ಪೊಲೀಸ್ ಕ್ವಾರ್ಟರ್ಸ್ ಬಳಿಯೇ ಮರ ಉರುಳಿದ್ದ ಪರಿಣಾಮ ಯಶವಂತಪುರ-ಮೆಜೆಸ್ಟಿಕ್ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.
Published On - 11:38 am, Fri, 24 April 20