ಗೌರಿಬಿದನೂರಿನ ವಾಟದ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷರ ಜತೆ ಮೋದಿ ಏನು ಮಾತಾಡಿದ್ರು?

ಗೌರಿಬಿದನೂರಿನ ವಾಟದ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷರ ಜತೆ ಮೋದಿ ಏನು ಮಾತಾಡಿದ್ರು?

ಬೆಂಗಳೂರು: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣ ಸಂಬಂಧ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ ಕುಮಾರ್ ಸಹ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರು ಬಂದಿದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ಆಹಾರ, ವಸತಿ ನೀಡಲಾಗುತ್ತಿದೆ. ಬೆಳೆ, ಹಣ್ಣು ತರಕಾರಿ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ರೈತರಿಗೆ ಮುಕ್ತ ಮಾರುಕಟ್ಟೆ ಒದಗಿಸಲಾಗಿದೆ. ಬೆಂಗಳೂರಿನಿಂದ ಅಗತ್ಯ ಔಷಧಿಗಳನ್ನು ತಂದು ಜನರಿಗೆ ನೀಡಲಾಗುತ್ತಿದೆ ಎಂದು ನವೀನ ಕುಮಾರ್ ತಿಳಿಸಿದರು.

ಮೋದಿ-ಗ್ರಾ.ಪಂ ಅಧ್ಯಕ್ಷರ ಸಂಭಾಷಣೆ: ಗ್ರಾಮಗಳಲ್ಲಿ ಜಲಸಂರಕ್ಷಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ನವೀನ ಕುಮಾರ್ ಹೇಳಿದರು. ಈ ವೇಳೆ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಜನರಿದ್ದಾರೆ ಎಂಬ ಮೋದಿ ಪ್ರಶ್ನೆಗೆ, 1500 ಜನರಿದ್ದಾರೆ ಎಂದು ನವೀನ್ ಕುಮಾರ್ ಉತ್ತರಿಸಿದರು. ಹಾಗಾದರೆ ದೊಡ್ಡ ಗ್ರಾಮ, ನಿಮ್ಮ ಮಾತನ್ನು ಜನರು ಕೇಳುತ್ತಾರಾ? ಎಂದು ಮೋದಿ ಕೇಳಿದರು. ಹೌದು ಜನರು ನಮ್ಮ ಮಾತನ್ನು ಕೇಳುತ್ತಾರೆ ಎಂದು ನವೀನ ನುಡಿದರು. ಕೊರೊನಾ ಜಾಗೃತಿ ಸಂಬಂಧ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರ ನಿಮಗೆ ಒಳ್ಳೆಯದಾಗಲಿ ಎಂದು ಪ್ರಧಾನಿ ಮೋದಿ ಶುಭಹಾರೈಸಿದರು.

ಇದೇ ವೇಳೆ ಪ್ರಧಾನಿ ಮೋದಿ ಇ ಗ್ರಾಮ ಪೋರ್ಟಲ್, ಮೊಬೈಲ್ ಆ್ಯಪ್ ಲಾಂಚ್ ಮಾಡಿದ್ರು. ರೈತರ ಭೂಮಿ‌ ಸರ್ವೇ ನಡೆಸಲು ಸ್ವಾಮಿತ್ವ ಯೋಜನೆಗೂ ಚಾಲನೆ‌ ಕೊಟ್ರು. ಡ್ರೋನ್ ಬಳಸಿ ಗ್ರಾಮೀಣ ಕೃಷಿ ಭೂಮಿ ಸರ್ವೇಗೆ ಹೊಸ ಯೋಜನೆ ಜಾರಿಗೊಳಿಸಿದ್ರು.

Published On - 12:53 pm, Fri, 24 April 20

Click on your DTH Provider to Add TV9 Kannada