ದಾವಣಗೆರೆ: ಕ್ರಿಮಿನಲ್‌ಗಳಿಗೆ ಅಪರಾಧ ಮಾಡಲು ನೂರು ದಾರಿಗಳಿದ್ರೆ, ಅದನ್ನು ಪತ್ತೆ ಹಚ್ಚೋಕೆ ನೂರಾ ಒಂದು ದಾರಿಗಳು ಅನ್ನೋ ಮಾತು ಕ್ರೈಮ್ ಜಗತ್ತಿನಲ್ಲಿದೆ. ಇದು ಗೊತ್ತಿರಲಿಲ್ಲ ಅಂತಾ ಕಾಣುತ್ತೆ ಈ ಪಾತಕಿಗಳಿಗೆ. ಮಕ್ಕಳು ಮತ್ತು ತಮ್ಮನೊಂದಿಗೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಕೊಂದಿದ್ದ ಪತ್ನಿಯನ್ನ ದಾವಣಗೆರೆ ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ.
ಹೌದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರ ಗ್ರಾಮದ ಬಸವರಾಜಪ್ಪ ಎಂಬ ವ್ಯಕ್ತಿಯನ್ನ ಆತನ ಪತ್ನಿ 36 ವರ್ಷದ ರೂಪಾ, ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಾನೆ ಅಂತಾ ತನ್ನ ತಮ್ಮ 27 ವರ್ಷದ ಸಂತೋಷ, ಪುತ್ರರಾದ 20 ವರ್ಷದ ಕಿರಣ್ ಕುಮಾರ್, 19 ವರ್ಷದ ಅರುಣ್ ಕುಮಾರ್ ಜೊತೆ ಸೇರಿ ಕತ್ತು ಹಿಚುಕಿ ಕೊಂದಿದ್ದಳು. ನಂತರ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಳು. ಅಷ್ಟೇ ಅಲ್ಲ ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿ ಸಾಲ ಮಾಡಿದ್ದ, ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಳು.
ಆದ್ರೆ ಪೊಲೀಸರಿಗೆ ಯಾಕೋ ಅನುಮಾನ ಬಂದಿದೆ. ಹೀಗಾಗಿ ಇಡೀ ಪ್ರಕರಣದ ಬಗ್ಗೆನೆೇ ಸಂಶಯ ಬಂದ ಹಿನ್ನೆಲೆಯಲ್ಲಿ ಪೊಲೀಸರು ಶವದ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಪೋಸ್ಟ್ ಮಾರ್ಟಮ್‌ನಲ್ಲಿ ಬಸವರಾಜಪ್ಪ ಅವರನ್ನ ಕುತ್ತಿಗೆ ಹಿಚುಕಿ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಪತ್ನಿಯನ್ನ ವಶಕ್ಕೆ ಪಡೆದಾಗ ಸತ್ಯ ಹೊರಬಿದ್ದಿದೆ. ಈ ಸಂಬಂಧ ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.