ರೂಪಾಂತರಿ ಕೊರೊನಾ: ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಒಪ್ಪದ ಸಂಪರ್ಕಿತರು.. ಅಪಾರ್ಟ್ಮೆಂಟ್ ಸೀಲ್ಡೌನ್!
ಅಪಾರ್ಟ್ಮೆಂಟ್ ಗೇಟ್ಗೆ ಬೀಗ ಹಾಕಲಾಗಿದ್ದು, ‘ನಾವೀಗ ಗೃಹ ಬಂಧನದಲ್ಲಿ ಇದ್ದೇವೆ..’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಅಪಾರ್ಟ್ಮೆಂಟ್ ಸಂಪರ್ಕಿಸುವ ರಸ್ತೆಯನ್ನೂ ಸಹ ಕ್ಲೋಸ್ ಮಾಡಲಾಗಿದೆ.

ಬೆಂಗಳೂರು: ಬೆಂಗಳೂರು ದಕ್ಷಿಣ ಭಾಗದ ವಸಂತಪುರದಲ್ಲಿ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮೂವರಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ, ಅಲ್ಲಿನ ನಿವಾಸಿಗಳನ್ನು ಕ್ವಾರಂಟೈನ್ ಮಾಡಲು ಹೋದ ಬಿಬಿಎಂಪಿ ಅಧಿಕಾರಿಗಳಿಗೆ ನಿವಾಸಿಗಳು ಶಾಕ್ ನೀಡಿದ್ದಾರೆ. ನಾವು ಯಾವ ಕಾರಣಕ್ಕೂ ಕ್ವಾರಂಟೈನ್ ಕೇಂದ್ರಕ್ಕೆ ಬರೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದು 25 ಫ್ಲಾಟ್ಗಳಿರುವ ಅಪಾರ್ಟ್ಮೆಂಟ್ ಆಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಬಹುತೇಕರು ಐಟಿ-ಬಿಟಿ ಉದ್ಯೋಗಿಗಳು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇಬ್ಬರು, ದ್ವಿತೀಯ ಸಂಪರ್ಕದಲ್ಲಿ 35 ಮಂದಿ ಇರುವುದು ಗೊತ್ತಾಗಿದೆ. ಸುಮಾರು 40 ಮಂದಿಯನ್ನು ಅಪಾರ್ಟ್ಮೆಂಟ್ನಿಂದ ಶಿಫ್ಟ್ ಮಾಡಿ, ಸಾಂಸ್ಥಿಕ ಕ್ವಾರಂಟೈನ್ ಮಾಡುವ ಉದ್ದೇಶದಿಂದ ಇಲ್ಲಿಗೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದರು. ಆದರೆ ನಿವಾಸಿಗಳು ಮಾತ್ರ ಯಾವುದೇ ಒತ್ತಾಯಕ್ಕೂ ಜಗ್ಗಲಿಲ್ಲ.
ನೀವು ಬೇಕಿದ್ದರೆ ಅಪಾರ್ಟ್ಮೆಂಟ್ನ್ನು ಸೀಲ್ಡೌನ್ ಮಾಡಿ.. ನಾವು ಇಲ್ಲೇ ಇರುತ್ತೇವೆ. ನೀವು ಹೋಟೆಲ್ಗಳಿಗೆ ಕರೆದುಕೊಂಡು ಹೋಗುತ್ತೀರಿ.. ಆದರೆ ಅಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಹಿಂದೆಲ್ಲ ಕ್ವಾರಂಟೈನ್ ಆಗಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದೂ ನಮಗೆ ಗೊತ್ತು. ನೀವು ಕನಿಷ್ಠ ಸೌಲಭ್ಯವನ್ನೂ ನಮಗೆ ಕೊಡೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ನಮಗೆ ಚಿಕ್ಕಮಕ್ಕಳಿದ್ದಾರೆ. ಅವರನ್ನೆಲ್ಲ ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಹೊಸ ನಿಯಮದಂತೆ ಕ್ವಾರಂಟೈನ್ ಮಾಡಬೇಕು ಎಂದು ಆರೋಗ್ಯ ಸಿಬ್ಬಂದಿ ಎಷ್ಟೇ ಹೇಳಿದರೂ ಅಪಾರ್ಟ್ಮೆಂಟ್ ನಿವಾಸಿಗಳು ಮಾತ್ರ ಅಪಾರ್ಟ್ಮೆಂಟ್ ಬಿಟ್ಟು ಕದಲುತ್ತಿಲ್ಲ.
ಸೀಲ್ಡೌನ್ಗೆ ನಿರ್ಧಾರ ಕೊನೆಗೂ ಆರೋಗ್ಯ ಸಿಬ್ಬಂದಿಯೇ ಸೋಲಬೇಕಾಯಿತು. ಇಡೀ ಅಪಾರ್ಟ್ಮೆಂಟ್ನ್ನು ಸೀಲ್ಡೌನ್ ಮಾಡಿ, ನಿವಾಸಿಗಳು ಅಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. 14 ದಿನಗಳವರೆಗೆ ವಸಂತನಗರದ ಅಪಾರ್ಟ್ಮೆಂಟ್ ಸೀಲ್ಡೌನ್ ಆಗಲಿದ್ದು, ಅದನ್ನು ಮತ್ತೂ 14 ದಿನಗಳ ಕಾಲ ವಿಸ್ತರಿಸುವ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಪಾರ್ಟ್ಮೆಂಟ್ ಗೇಟ್ಗೆ ಬೀಗ ಹಾಕಲಾಗಿದ್ದು, ‘ನಾವೀಗ ಗೃಹ ಬಂಧನದಲ್ಲಿ ಇದ್ದೇವೆ..’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಅಪಾರ್ಟ್ಮೆಂಟ್ ಸಂಪರ್ಕಿಸುವ ರಸ್ತೆಯನ್ನೂ ಸಹ ಕ್ಲೋಸ್ ಮಾಡಲಾಗಿದೆ.
ಅಪಾರ್ಟ್ಮೆಂಟ್ ಬಳಿ ಕಂಡುಬಂದ ದೃಶ್ಯಗಳು




