ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ರಂಗನಿರ್ದೇಶಕ ಪ್ರಸಾದ ರಕ್ಷಿದಿ
‘ಸುರಾಸುತ ಸೇವಿತೆ, ಮಾತುಲಪ್ರಿಯೆ, ಪಿತೃಪ್ರಿಯೆ, ಸೆರೆಮಾತೆ ನಮೋಸ್ತುತೇ’ ಎಂಬ ಶಿರೋನಾಮದೊಡನೆ ಪ್ರಾರಂಭವಾಗುವ ಈ ಬರಹ, ಲಲಿತ ಪ್ರಬಂಧದ ದಾಟಿಯಲ್ಲಿ ಸಾಗಿ ಹಳ್ಳಿಯ ರೈತರ ಮೂರು ತಲೆಮಾರುಗಳ ಜನಜೀವನವನ್ನು ಚಿತ್ರಿಸುತ್ತದೆ. ಹಳ್ಳಿಗಳಲ್ಲಿ ಮೊದಲೇ ಇದ್ದ ಸುರೆ ಸಂಸ್ಕೃತಿ ನಿಧಾನವಾಗಿ ಕುಡುಕತನವಾಗುತ್ತಿರುವ ವಿದ್ಯಮಾನವನ್ನು ತರೆದಿಡುತ್ತದೆ.’ ರಂಗನಿರ್ದೇಶಕ ಪ್ರಸಾದ ರಕ್ಷಿದಿಯವರು ತಮ್ಮ ಆಯ್ಕೆಯ ಪುಸ್ತಕಗಳ ಬಗ್ಗೆ ಬಹಳ ಆಸಕ್ತಿಕರವಾಗಿ ಹೇಳಿದ್ದಾರೆ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ರಂಗನಿರ್ದೇಶಕ ಪ್ರಸಾದ ರಕ್ಷಿದಿ ಅವರ ಆಯ್ಕೆಗಳು ಇಲ್ಲಿವೆ.
ಕೃ: ರಂಗ ಕೈರಳಿ (ರಂಗಪ್ರವಾಸ ಕಥನ)
ಲೇ: ಕಿರಣ ಭಟ್
ಪ್ರ: ಬಹುರೂಪಿ
ಈ ಪುಸ್ತಕವನ್ನು ಓದುತ್ತ ಹೋದಂತೆ ಕೇರಳದ ಸಾಂಸ್ಕೃತಿಕ ಎಚ್ಚರದ ಜೊತೆಯಲ್ಲಿ, ರಂಗಭೂಮಿಯ ಆಳ ಮತ್ತು ವಿಸ್ತಾರ ಎರಡನ್ನೂ ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಇದು ಕೇರಳದ ಸಾಂಸ್ಕೃತಿಕ ವಿಹಂಗಮ ನೋಟ. ಇದೊಂದು ರೀತಿ ಪಾಶ್ಚಾತ್ಯ ಪೌರಾತ್ಯಗಳ ಸಂಗಮ ರಂಗ ಸ್ಥಳ. ಇಲ್ಲಿಯ ರಂಗ ವೈವಿಧ್ಯವೂ ಬೆರಗು ಹುಟ್ಟಿಸುವಂತದು. ಆಧುನಿಕ ನಾಟಕಗಳಿಂದ ಹಿಡಿದು ಜತನದಿಂದ ಕಾಪಾಡಿದ ಕಥಕ್ಕಳಿಯ ವರೆಗೆ ಪರಿಚಯಾತ್ಮಕ ಬರಹಗಳಿವೆ.
ಹಲವು ರಂಗ ಪ್ರಕಾರಗಳಿಗೆ ನಟರು ಸಂಗೀತಕಾರರು ಅಭ್ಯಾಸ ಮಾಡಬೇಕಾದ ರೀತಿ ಮತ್ತು ಹತ್ತು ವರ್ಷಗಳಷ್ಟು ದೀರ್ಘಾವಧಿಯ ತರಬೇತಿ ಇವೆರಡನ್ನೂ ಗಮನಿಸಿದಾಗ, ಈ ವೇಗದ ಕಾಲದಲ್ಲೂ ಆ ಬದ್ಧತೆಯನ್ನು ಉಳಿಸಿಕೊಂಡಿರುವ ಆ ಜನಪದದ ಬಗ್ಗೆ ಗೌರವ ಮೂಡದೆ ಇರದು. ಜೊತೆಜೊತೆಯಲ್ಲಿಯೇ ಅವುಗಳಿಗೆ ಸಂವಾದಿಯಾಗಿರುವ ಕನ್ನಡ ನಾಟಕಗಳನ್ನೂ ಉಲ್ಲೇಖ ಮಾಡಲು ಲೇಖಕರು ಮರೆಯುವುದಿಲ್ಲ.
ಕಿರಣ್ ಭಟ್ ಅವರ ಬರಹಗಳು ಗಮನ ಸೆಳೆಯುವುದು, ಅವರು ಕೇರಳದ ರಂಗಭೂಮಿಯನ್ನು ‘ನೋಡುವಾಗ’ ಅವರಿಗಿರುವ ಡೆಮಾಕ್ರಟಿಕ್ ದೃಷಿಕೋನದಿಂದ ಮತ್ತು ಬಹುಶಃ ಆ ಕಾರಣಕ್ಕಾಗಿ ಉದ್ದಕ್ಕೂ ಹರಿಯತ್ತ ಸಾಗುವ ಜೀವನಪ್ರೀತಿಯಿಂದ. ಎರಡು ಮೀಟರ್ ಚಾಯ ಕೊಡುವ ನಾಯರ್. ಕಿರಣ್ ಅವರಿಗೆ ರಂಗಮಾಹಿತಿಗಳನ್ನು ಒದಗಿಸುವ ಹೋಟೆಲ್ನಲ್ಲಿ ಕೆಲಸ ಮಾಡುವ ಉಣ್ಣಿ. ಡ್ರೈವರ್ ಜಾನ್ಸನ್, ಗಾಯಕ ಬಾಬು. ಹೀಗೆ ಮುಂದುವರಿಯುತ್ತದೆ.
ರಂಗಕೈರಳಿ ಉಲ್ಲೇಖವಾಗಿರುವ ಇನ್ನೊಂದು ಹೃದಯಸ್ಪರ್ಶಿ ಕಥಾನಕ. ಅರುವತ್ತೈದು ವರ್ಷಗಳ ಹಿಂದೆ ಮದುವೆಯಾಗಿ ಬಂದನಂತರ ತವರಿನ ಸಂಪರ್ಕವೇ ಇಲ್ಲದ ಪಾರ್ವತಿ ಅಮ್ಮ ಮತ್ತೆ ತಮ್ಮನನ್ನು ಭೇಟಿಯಾಗುವುದು ಮತ್ತು ಅದಕ್ಕೆ ಕಿರಣ್ ಭಟ್ ಅವರೂ ಕಾರಣರಾಗುವುದು. ಇಷ್ಟೆಲ್ಲ ವಿವರಗಳಿರುವ ಪುಸ್ತಕದಲ್ಲಿ ಕೇರಳದ ರಂಗತಂಡಗಳ ತಯಾರಿ ತಾಲೀಮುಗಳ ಬಗ್ಗೆ ಮತ್ತು ಅಲ್ಲಿನ ರಂಗ ಆರ್ಥಿಕತೆಯ ಬಗ್ಗೆ (ಸರ್ಕಾರಿ ಮತ್ತು ಸಾರ್ವಜನಿಕ) ಒಂದೆರಡು ಅಧ್ಯಾಯಗಳನ್ನು ಬರೆಯಬಹುದಿತ್ತು. ಇದರಿಂದ ನಮ್ಮ ರಂಗಭೂಮಿ ಕಲಾವಿದರಿಗೂ ಒಂದಿಷ್ಟು ಮಾಹಿತಿ ಸಿಗುತ್ತಿತ್ತು.
ಕೃ: ನಮ್ಮ ದಿನಗಳು ಮತ್ತು ಇತರ ಪ್ರಬಂಧಗಳು
ಲೇ: ಮೇಟಿಕೆರೆ ಹಿರಿಯಣ್ಣ
ಪ್ರ: ಜನಪದ ಪ್ರಕಾಶನ
ಜಿರಾತುದಾರ ಎಂಬ ಹೆಸರಿನಲ್ಲಿ ಬರೆಯುತ್ತ ನಮ್ಮೆಲ್ಲರನ್ನು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತಿರುವ ಮೇಟಿಕೆರೆ ಹಿರಿಯಣ್ಣನವರು, ವೃತ್ತಿಯಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು, ನೂರಾರು ಶಿಷ್ಯರನ್ನು ತಯಾರು ಮಾಡಿದವರು, ಈಗಲೂ ಅಪ್ಪಟ ಜಿರಾತುದಾರರು. ವಯಸ್ಸಿನಲ್ಲೂ ಬೆಳಗ್ಗೆ ಎದ್ದು ಮುನ್ನೂರು ಕಾಯಿ ಸುಲಿದು, ಮೂಟೆ ಎತ್ತಾಕಿ ಹಾಸನಕ್ಕೆ ಬಂದು ಹೋಗಬಲ್ಲ ದೇಸೀ ಕಸುವಿನ ಅಪ್ಪಟ ರೈತ.
‘ನಮ್ಮ ದಿನಗಳು’ ಹಿರಿಯಣ್ಣನವರ ಇತ್ತೀಚಿನ ಕೃತಿಗಳಲ್ಲೊಂದು. ಇದರಲ್ಲಿ ನಮ್ಮ ದಿನಗಳು ಎಂಬ ನೀಳ್ಗತೆಯಂತಿರುವ ಬರಹವೂ ಜೊತೆಗೆ ಹಲವು ಪ್ರಬಂಭಗಳೂ ಇವೆ. ಇವು ಒಂದು ರೀತಿಯಲ್ಲಿ ಹಿರಿಯಣ್ಣನವರ ಆತ್ಮ ಕಥೆಯ ಭಾಗಗಳೇ ಎನ್ನುವಂತಿವೆ. ಈ ಪುಸ್ತಕದ ಮೊದಲ ಅಧ್ಯಾಯದ ಶೀರ್ಷಿಕೆಯೇ ಮನೋಹರವಾಗಿದೆ. ‘ಸುರಾಸುತ ಸೇವಿತೆ, ಮಾತುಲಪ್ರಿಯೆ, ಪಿತೃಪ್ರಿಯೆ, ಸೆರೆಮಾತೆ ನಮೋಸ್ತುತೇ’ ಎಂಬ ಶಿರೋನಾಮದೊಡನೆ ಪ್ರಾರಂಭವಾಗುವ ಈ ಬರಹ, ಲಲಿತ ಪ್ರಬಂಧದ ದಾಟಿಯಲ್ಲಿ ಸಾಗಿ ಹಳ್ಳಿಯ ರೈತರ ಮೂರು ತಲೆಮಾರುಗಳ ಜನಜೀವನವನ್ನು ಚಿತ್ರಿಸುತ್ತದೆ. ಹಳ್ಳಿಗಳಲ್ಲಿ ಮೊದಲೇ ಇದ್ದ ಸುರೆ ಸಂಸ್ಕೃತಿ ನಿಧಾನವಾಗಿ ಕುಡುಕತನವಾಗುತ್ತಿರುವ ವಿದ್ಯಮಾನವನ್ನು ತರೆದಿಡುತ್ತದೆ.
ಈ ಎಲ್ಲ ಅಧ್ಯಾಯಗಳು ಕುಡಿತದ ಹಾವಳಿ, ದುಷ್ಪರಿಣಾಮಗಳು. ಮೂಢನಂಬಿಕೆ, ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯ ದುರಂತ, ಪರಿಸರನಾಶದಿಂದ ನಾವು ತೆರಬೇಕಾದ ಬೆಲೆ, ಧಾರ್ಮಿಕ ಡಂಬಾಚಾರಗಳು ಹೀಗೆ ಹಲವು ಬಗೆಯ ಆದರೆ ಒಂದು ಸೂತ್ರಬದ್ಧವಾದ ಸಮಾಜಮುಖಿ ಚಿಂತನೆಯನ್ನು ಕಟ್ಟುತ್ತಾ ಹೋಗುತ್ತದೆ. ಈ ಎಲ್ಲ ಬರಹಗಳು ಕೂಡಾ ನಮ್ಮನ್ನು ಹಿಡಿದಿಡುವುದು ಮತ್ತು ನಗದಿರಲಾರದಂತೆ ಓದಿಸಿಕೊಂಡು ಹೋಗುವುದು. ಹಾಸನದ ಚನ್ನರಾಯಪಟ್ಟಣ ಸೀಮೆಯ ಆಡುಮಾತಿನ ಸೊಗಡು ಮತ್ತು ಲೇಖಕರ ಹರಿತವಾದ ಹಾಸ್ಯ ಪ್ರಜ್ಞೆಯಿಂದ.
ಈ ಉದಾಹರಣೆಯನ್ನು ನೋಡಿ ‘ಬೋರನ ಮನೆಯಲ್ಲಿ ಪಿತೃಪಕ್ಷನಿಮಿತ್ತ ಜೋಯಿಸರಿಗೆ ದಾನ ಕೊಡು ರಿವಾಜಿತ್ತು, ಹಿರಿಯರಿಗೆಲ್ಲಾ ಹೆಸರು ಹೇಳುತ್ತಾ ತಿಲೋದಕ ಬಿಟ್ಟ ನಂತರ, ಬೋರ ಜೋಯಿಸರು ನನ್ನ ಹೆಸರು ಹೇಳಲೇ ಇಲ್ಲವೆಂದು ತಕರಾರು ತೆಗೆದ.’
‘ಲೋ ಮೈಸೂರೆಮ್ಮೆ ಇದೂ ಕನ್ನಡಾನೇ ಕಣ್ಲಾ, ಇದು ಕುರಿ ಕನ್ನಡ, ನಾವು ಕುರಿ ಮೇಸ್ಬೇಕಾದ್ರೆ ಮಾತಾಡ್ತಯಿದ್ ಭಾಷೆ’ ( ಗುಡಿಗೌಡನ ಮೂರು ಪ್ರಶ್ನೆಗಳು) ನಮ್ಮ ಭಾಷೆಯಲ್ಲಿನ ಶುದ್ಧತೆ ಮತ್ತು ಶ್ರೆಷ್ಠತೆಯ ವ್ಯಸನವನ್ನು ಹಳ್ಳಿಯ ಸಹಜ ವಿವೇಕದ ಬೆಳಕಲ್ಲಿ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ.
ಸ್ತ್ರೀ ಶಕ್ತಿ ಸಿಂಡ್ರೋಮ್ಮ ತ್ತು ಬೋರನ ಸಂಶೋಧನೆ, ಬುರುಡೆ ಟಿವಿಯಲ್ಲಿ ಚೋರಾನಂದರು, ಮುಂತಾದ ಬರಹಗಳನ್ನು ಓದಿಯೇ ಅನುಭವಿಸಬೇಕು. ಹಿರಿಯರಾದ ಗೊರೂರ ನಂತರ ಈ ರೀತಿಯ ಬರಹಗಳು ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಹಳ್ಳಿಯ ಚಿತ್ರಣಗಳ ಜೊತೆಯಲ್ಲಿಯೇ ಒಂದು ಆರೋಗ್ಯವಂತ ಸಮಾಜದ ಬಗ್ಗೆ ಯೋಚಿಸುವಂತೆ ಮಾಡುವ ಈ ಶಕ್ತ ಬರಹಗಳು ಮೈದುಂಬ ನಗುವಂತೆ ಜೊತೆಯಲ್ಲಿ ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತವೆ.
Published On - 1:45 pm, Tue, 29 December 20