AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್​ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್​ಸಿಎಲ್​: ಸಾರ್ವಜನಿಕರಿಂದ ಆಕ್ಷೇಪ

ಬೆಂಗಳೂರಿನ ಹತ್ತು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ ಮಳಿಗೆ ಸ್ಥಾಪನೆ ಕುರಿತು ಭಾರಿ ಚರ್ಚೆ ಏರ್ಪಟ್ಟಿದೆ. ಕರ್ನಾಟಕದ​ ನಂದಿನಿ ಇರುವಾಗ ಗುಜರಾತ್​ನ ಅಮುಲ್​ಗೆ ಏಕೆ ಅವಕಾಶ ಎಂದು ಆಕ್ರೋಶವಾಗುತ್ತಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ. ​

ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್​ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್​ಸಿಎಲ್​: ಸಾರ್ವಜನಿಕರಿಂದ ಆಕ್ಷೇಪ
ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್​ ಮಳಿಗೆ
ಗಂಗಾಧರ​ ಬ. ಸಾಬೋಜಿ
|

Updated on:Jun 18, 2025 | 12:00 PM

Share

ಬೆಂಗಳೂರು, ಜೂನ್​ 18: ನಗರದ ಹತ್ತು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ ಮಳಿಗೆ ಸ್ಥಾಪಿಸಲು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕದ್ದೇ ಆದ ಕೆಎಂಎಫ್​ ನಂದಿನಿ (KMF Nandini) ಇರುವಾಗ ಅಮುಲ್​ಗೆ ಏಕೆ ಅವಕಾಶವೆಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್​. ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ಕಿಯೋಸ್ಕ್‌ ಮಳಿಗೆ ಸ್ಥಾಪಿಸಲು ಅಮುಲ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬಿಎಂಆರ್‌ಸಿಎಲ್ ತನ್ನ ಹೌಸ್ ಜರ್ನಲ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ
Image
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
Image
ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ
Image
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
Image
ಮಳೆ ಅಬ್ಬರ ಜೋರು; ಮಂಗಳೂರು, ಚಿಕ್ಕಮಗಳೂರಿನ ಹಲವೆಡೆ ಅನಾಹುತ

ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ: ಮಕ್ಕಳಿಗಾಗಿ ಟ್ರಾಲಿ ವ್ಯವಸ್ಥೆ

ಮೂಲಗಳ ಪ್ರಕಾರ ಮಳಿಗೆಗಳ ಸ್ಥಾಪನೆಗಾಗಿ ಬಿಎಂಆರ್‌ಸಿಎಲ್ ಟೆಂಡರ್​​ ಕರೆದಿದ್ದು, ಆ ಟೆಂಡರ್​ ಅಮುಲ್ ಪಾಲಾಗಿದೆ ಎನ್ನಲಾಗುತ್ತಿದೆ.​ ಆ ಮೂಲಕ ಹಾಲು, ಚಾಕೊಲೇಟ್‌ಗಳು, ಐಸ್‌ಕ್ರೀಮ್, ತ್ವರಿತ ಆಹಾರ ಉತ್ಪನ್ನಗಳು ಮತ್ತು ತಿಂಡಿಗಳನ್ನು ಖರೀದಿಸಬಹುದಾಗಿದೆ. ಇದು ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದೆ.

ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗುವುದರೊಂದಿಗೆ ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ಕರ್ನಾಟಕದ​ ನಂದಿನಿ ಇರುವಾಗ ಗುಜರಾತ್​ನ ಅಮುಲ್​ಗೆ ಏಕೆ ಅವಕಾಶ ಎಂದು ಆಕ್ರೋಶವಾಗುತ್ತಿದೆ. ಅಷ್ಟೇ ಅಲ್ಲದೆ ಇದು ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ.

ಡೂಪ್ಲಿಕೇಟ್‌ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ ಎಂದ ಜೆಡಿಎಸ್​

ಈ ಕುರಿತಾಗಿ ಜೆಡಿಎಸ್​ ಟ್ವೀಟ್ ಮಾಡಿದ್ದು, ಕಮಿಷನ್‌ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿಕೆ ಶಿವಕುಮಾರ್​! ಡೂಪ್ಲಿಕೇಟ್‌ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ. ಚುನಾವಣೆಗೂ ಮುಂಚೆ #SaveNandini, ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗೀ ಬಿಡುತ್ತಿದ್ದ ಡಿಕೆ ಶಿವಕುಮಾರ್​, ಕಮಿಷನ್‌ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದೆ.

ಜೆಡಿಎಸ್​ ಟ್ವೀಟ್

ಇದನ್ನೂ ಓದಿ: ವಿಜಯಪುರ ಟು ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್​, ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ. ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್‌ “ನಂದಿನಿ”ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:59 am, Wed, 18 June 25