ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ನಾ. ದಾಮೋದರ ಶೆಟ್ಟಿ

‘ಕೇರಳದಲ್ಲಿ ಕಿರಣ ಭಟ್​ ಅವರಿಗೆ ಜೊತೆಯಾದ ರಂಗಹುಚ್ಚ ಉಣ್ಣಿಕೃಷ್ಣನ್​. ಯಾವತ್ತು ಎಲ್ಲಿ ಯಾವ ನಾಟಕವಿದೆ ಎಂಬುದು ಉಣ್ಣಿಗೆ ಗೊತ್ತಿರುತ್ತಿತ್ತು. ಅದು ‘ಚವಿಟ್ಟು ನಾಡಗ’ವಿರಬಹುದು, ಕಥಕ್ಕಳಿ, ಕೂಡಿಯಾಟ್ಟವೇ ಇರಬಹುದು, ಜನಪದವೋ ನವ್ಯ ನಾಟಕಗಳೋ ಗೊಂಬೆಯಾಟವೋ ಇರಬಹುದು. ಅಲ್ಲಿ ಅವರಿಬ್ಬರು ಹಾಜರ್‘ ರಂಗಪ್ರವಾಸ ಕಥನದ ಬಗ್ಗೆ ನಾ. ದಾಮೋದರ ಶೆಟ್ಟಿ ಹೇಳುವುದು ಹೀಗೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ನಾ. ದಾಮೋದರ ಶೆಟ್ಟಿ
ಲೇಖಕ ನಾ. ದಾಮೋದರ ಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Dec 30, 2020 | 11:03 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕವಿ, ಲೇಖಕ ನಾ. ದಾಮೋದರ ಶೆಟ್ಟಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ರಂಗಕೈರಳಿ (ರಂಗಪ್ರವಾಸ)

ಲೇ: ಕಿರಣ ಭಟ್

ಪ್ರ: ಬಹುರೂಪಿ

ಕಿರಣ ಭಟ್ ಬರೆದ ‘ರಂಗಕೈರಳಿ’ಯೊಂದು ರಂಗಪ್ರವಾಸಕಥನ. ಕೇರಳದ ಆಲುವಾದಿಂದ ತೊಡಗಿ ಕಣ್ಣೂರುವರೆಗೆ ಹಲವು ಕಡೆ ಉದ್ಯೋಗ ನಿಮಿತ್ತವಾಗಿ ಹೋಗಿದ್ದ ಖ್ಯಾತ ರಂಗಕರ್ಮಿ ಕಿರಣ ಭಟ್, ತಾವು ಎಲ್ಲೆಲ್ಲಿ ತಳವೂರಿದ್ದರೋ ಅಲ್ಲಿ ಹಾಗೂ ಸುತ್ತಮುತ್ತಣ ಪ್ರದೇಶಗಳಲ್ಲಿ ನಾಟಕಗಳಿದ್ದರೆ ನೋಡಿಯೇ ಸಿದ್ಧ. ದೇವರ ನಾಡಿನಲ್ಲಿ ಇದ್ದ ಕಾಲವಷ್ಟೂ ಆಫೀಸು ಕೆಲಸ ಮುಗಿಸಿ ಹುಚ್ಚು ಹಿಡಿದವರಂತೆ ಬಸ್ಸೋ ರೈಲೋ ಸ್ಕೂಟರೋ ಏರಿ ಹೋಗಿ ನೋಡಿದ ನಾಟಕಗಳ ವಿಚಾರವನ್ನು ‘ರಂಗಕೈರಳಿ’ಯಲ್ಲಿ ಸಾದರಪಡಿಸಿದ್ದಾರೆ.

ಅವರಂಥವರೇ  ರಂಗಹುಚ್ಚ ಉಣ್ಣಿಕೃಷ್ಣನ್ ಅವರಿಗೆ ಸಂಗಾತಿಯಾದದ್ದೊಂದು ವಿಶೇಷವೆ. ಯಾವತ್ತು ಎಲ್ಲಿ ಯಾವ ನಾಟಕವಿದೆ ಎಂಬುದು ಉಣ್ಣಿಗೆ ಗೊತ್ತು. ಅದು ‘ಚವಿಟ್ಟು ನಾಡಗ’ವಿರಬಹುದು, ಕಥಕ್ಕಳಿ, ಕೂಡಿಯಾಟ್ಟವೇ ಇರಬಹುದು, ಜನಪದವೋ ನವ್ಯ ನಾಟಕಗಳೋ ಗೊಂಬೆಯಾಟವೋ ಇರಬಹುದು. ಅಲ್ಲಿ ಅವರಿಬ್ಬರು ಹಾಜರ್!

ವಿಶೇಷವೆಂದರೆ ರಂಗಬದುಕಿನೊಂದಿಗೆ ನಿಜದ ಬದುಕನ್ನು ಸಮ್ಮಿಶ್ರಗೊಳಿಸಿದ ಕಿರಣ ಭಟ್ ಹೊಸತೊಂದು ಲೋಕದಕಡೆಗೆ ನಮ್ಮನ್ನು ಕರೆದೊಯ್ಯುವಲ್ಲಿ ಸಫಲರಾಗಿದ್ದಾರೆ. ನಾಲ್ಕು ದಶಕಗಳ ತನಕ ಪರಸ್ಪರ ಭೇಟಿಯಾಗದಿದ್ದ ರಕ್ತಸಂಬಂಧಿಗಳು ಒಂದಾಗುವಂತಾದದ್ದು ಕಿರಣ ಭಟ್ಟರ ರಂಗಯಾತ್ರೆಯ ಫಲಶ್ರುತಿಯೂ ಹೌದು ಎಂಬ ರೋಚಕ ಘಟನೆಯೂ ಇಲ್ಲಿದೆ.

ಕೃ: ಮಿನುಗೆಲೆ ಮಿನುಗೆಲೆ ನಕ್ಷತ್ರ (ಮಕ್ಕಳ ನಾಟಕ)

ಲೇ: ಶಶಿರಾಜ ರಾವ್ ಕಾವೂರು

ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ

ಮಕ್ಕಳ ನಾಟಕ ಬರ ಎದುರಿಸುತ್ತಿರುವ ಕಾಲಘಟ್ಟದಲ್ಲಿ ಆಪದ್ಬಾಂಧವನಂತೆ ಬಂದ ನಾಟಕ ‘ಮಿನುಗೆಲೆ ಮಿನುಗೆಲೆ ನಕ್ಷತ್ರ’. ಮಕ್ಕಳ ನಾಟಕದಲ್ಲಿ ಇರಬೇಕಾದ ಎಲ್ಲ ವೈವಿಧ್ಯಗಳೂ ಇಲ್ಲಿವೆ.

ನಾಡವರ ಅಸೂಯಾಪರತೆಗಿಂತ ಕಾಡುಪ್ರಾಣಿಗಳ ಸಜ್ಜನಿಕೆ, ಮುಗ್ಧತೆ ಎಷ್ಟು ಶ್ರೇಷ್ಠ ಎಂಬುದನ್ನು ನಾಟಕ ನಿರವಿಸುತ್ತದೆ. ರಮ್ಯ ಎಂಬ ಬಡವಿ ಹುಡುಗಿ ಊರ್ಮಿಳಾ ಎಂಬ ಜಂಬದ ಕೋಳಿಯ ಮನಃಪರಿವರ್ತನೆ ಮಾಡುವ ಕತೆಯೂ ಇಲ್ಲಿ ಓತಪ್ರೋತಗೊಂಡಿದೆ. ಅನಗತ್ಯ ಸಂಭಾಷಣೆಗಳಿಲ್ಲ. ಮಾತುಗಳ ನಡುವೆ ಧಾರಾಳ ಧ್ವನ್ಯರ್ಥಗಳು ವಿಜೃಂಭಿಸಿವೆ. ಇಡಿಯ ನಾಟಕವೇ ವರ್ಣರಂಜಿತ. ಇಲ್ಲಿ ಶಿಕ್ಷಣವಿದೆ, ಡೊಂಬರಾಟವಿದೆ, ಪ್ರಾಣಿಗಳ ಒಡ್ಡೋಲಗವಿದೆ. ಯಕ್ಷಗಾನದ ನವುರು ಹಾಸ್ಯವಿದೆ.

ಇಲ್ಲಿ ನಕ್ಷತ್ರಲೋಕವೇ ಭುವಿಗೆ ಪದಾರ್ಪಣೆ ಮಾಡುತ್ತದೆ. ಆಪತ್ತಿನಲ್ಲಿ ಸಿಲುಕಿದ ರಮ್ಯಳನ್ನು ನಕ್ಷತ್ರವು ಪಾರುಮಾಡುತ್ತದೆ.  ವಿಶೇಷವೆಂದರೆ ಇಲ್ಲಿ ಎಲ್ಲವೂ ಒಂದು ನಿರ್ದಿಷ್ಟ ಸೂತ್ರದಲ್ಲಿ ಬಂಧಿಸಲ್ಪಟ್ಟಿರುವುದರಿಂದ ಯಾವ ಸಂಭಾಷಣೆಯೂ ವ್ಯರ್ಥ ಎನ್ನಿಸುವುದಿಲ್ಲ. ಹಲವು ಯಶಸ್ವೀ ನಾಟಕಗಳನ್ನು ಬರೆದು ಕರಾವಳಿಯ ನಾಟಕರಂಗಕ್ಕೆ ಹೊಸ ಯೌವನ ತಂದಿತ್ತ ಶಶಿರಾಜರಾವ್ ಕಾವೂರು ಪ್ರಸ್ತುತ ಮಕ್ಕಳ ನಾಟಕದ ಮೂಲಕ ರಂಗದ ಇನ್ನೊಂದು ಮಜಲನ್ನು ತಲುಪಿದ್ದಾರೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಲೇಖಕಿ ಚೈತ್ರಾ ಅರ್ಜುನಪುರಿ; ‘Girls of Riyadh’ ಮತ್ತು ‘The Girl Who Fell to Earth’

Published On - 12:50 pm, Tue, 29 December 20