2020 Year in Review | ‘ಓದಿನಂಗಳ’ದಲ್ಲಿ ಲೇಖಕ ಕಮಲಾಕರ ಕಡವೆ
'ಕಾದಂಬರಿಯು ಅಪಾರ ಸಾಧ್ಯತೆಗಳ ಸಾಹಿತ್ಯಿಕ ಪ್ರಕಾರವೆಂದು ನಂಬಿರುವ ಅಮಿತಾವ ಘೋಷ ಅವರ ಇತ್ತೀಚಿನ ಕೃತಿ ‘ಗನ್ ಐಲ್ಯಾಂಡ್’ (ಬಂದೂಕು ದ್ವೀಪ) ಹವಾಮಾನ ಸ್ಥಿತ್ಯಂತರದ ಪ್ರಕ್ರಿಯೆ ಎಷ್ಟು ಸಂಕೀರ್ಣ ಮತ್ತು ಅದು ಹೇಗೆ ಜನರ ಮೇಲೆ, ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ದರ್ಶಿಸುವ ಕಾದಂಬರಿ.' ಎನ್ನುತ್ತಾರೆ ಲೇಖಕ ಕಮಲಾಕರ ಕಡವೆ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಲೇಖಕ, ಅನುವಾದಕ ಕಮಲಾಕರ ಕಡವೆ ಅವರ ಆಯ್ಕೆಗಳು ಇಲ್ಲಿವೆ.
ಕೃ: Gun Island (ಕಾದಂಬರಿ) ಲೇ: ಅಮಿತಾವ ಘೋಷ್ ಪ್ರ: ಪೆಂಗ್ವಿನ್ ಪ್ರಕಾಶನ
ಕಾದಂಬರಿಯು ಅಪಾರ ಸಾಧ್ಯತೆಗಳ ಸಾಹಿತ್ಯಿಕ ಪ್ರಕಾರವೆಂದು ನಂಬಿರುವ ಅಮಿತಾವ ಘೋಷ ಅವರ ಇತ್ತೀಚಿನ ಕೃತಿ ‘ಗನ್ ಐಲ್ಯಾಂಡ್’ (ಬಂದೂಕು ದ್ವೀಪ) ಹವಾಮಾನ ಸ್ಥಿತ್ಯಂತರದ ಪ್ರಕ್ರಿಯೆ ಎಷ್ಟು ಸಂಕೀರ್ಣ ಮತ್ತು ಅದು ಹೇಗೆ ಜನರ ಮೇಲೆ, ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ದರ್ಶಿಸುವ ಕಾದಂಬರಿ. ಕತೆಯ ಹಂದರ ಭಾರತ, ಬಾಂಗ್ಲಾದೇಶ, ಅಮೇರಿಕಾ, ಇಟಲಿ ಹೀಗೆ ಬೇರೆ ಬೇರೆ ದೇಶಗಳ ಜನರ ಬೇರೆ ಬೇರೆ ಪ್ರದೇಶಗಳಲ್ಲಿ ಆಗಿಹೋಗುವ ಘಟನೆಗಳನ್ನು ನಿರೂಪಿಸುತ್ತದೆ. ಒಂದು ಹದದಲ್ಲಿ ಕತೆ ಎನ್ನುವದು ಇಲ್ಲಿ ಸಾಕ್ಷ್ಯಚಿತ್ರದ ತರಹ ಭೂತಕಾಲದ ಘಟನೆಗಳು, ವರ್ತಮಾನದ ನಾಡುನುಡಿಗಳು ಹಾಗೂ ಅವುಗಳ ನಡುವಿರುವ ಸಂಬಂಧಗಳನ್ನು ವಿಶ್ಲೇಷಿಸುತ್ತ ಸಾಗುತ್ತದೆ. ಮಾನವಕೇಂದ್ರಿತ ದೃಷ್ಟಿಕೋನವನ್ನು ತೊರೆದು ನಿಸರ್ಗದಲ್ಲಿನ ಎಲ್ಲ ಜೀವರಾಶಿಗಳೂ ಸಮಾನ ಕ್ರಿಯಾಶಾಲಿಗಳು ಎಂಬ ಕಾಣ್ಕೆಯನ್ನು ತನ್ನದಾಗಿಸಿಕೊಂಡಿರುವ ಕಾದಂಬರಿ.
ಕೃ: God Is Dead, There Is No God: The Vachanas of Allama Prabhu ಲೇ: ಮನು ದೇವದೇವನ್ ಪ್ರ: ಸ್ಪೀಕಿಂಗ್ ಟೈಗರ್ ಪಬ್ಲಿಷರ್ಸ್
ಈ ಸಂಗ್ರಹದಲ್ಲಿ ಅಲ್ಲಮನ 250 ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ ಮನು ದೇವದೇವನ್. ಪುಸ್ತಕದ ಮುನ್ನುಡಿಯಲ್ಲಿ ವಚನ ಚಳುವಳಿಯ ಐತಿಹಾಸಿಕ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸಿ, ವಚನಗಳು ಹೇಗೆ ಶತಮಾನಗಳ ಕಾಲ ಮೌಖಿಕ ಮಾಧ್ಯಮದಲ್ಲಿ ಪ್ರಸ್ರಣೆಯಲ್ಲಿದ್ದು, ಮುಂದೆ ಮುಕ್ತ ಛಂದ ರೂಪವನ್ನು ಕ್ರಮೇಣ ಪಡೆದಿರಬಹುದು ಎಂದು ವಿವರಿಸುತ್ತಾರೆ. ಮೂಲತಃ ದ್ವಿತೀಯಾಕ್ಷರ ಪ್ರಾಸವುಳ್ಳ ತ್ರಿಪದಿಗಳ ರೂಪದ ರಚನೆಗಳು ಆಗಿದ್ದಿರಬಹುದು ಎಂದು ಅವರ ವಾದ. ಅಲ್ಲಮನ ವಚನಗಳು ಬೆಡಗಿನ ರಚನೆಗಳು ಮತ್ತು ತುಂಬ ಸಾಂಕೇತಿಕ ಮಹತ್ವ ಹೊಂದಿರುವಂತವು. ಆದಾಗ್ಯೂ ದೇವದೇವನ್ ಇಂಗ್ಲೀಷ ಓದುಗರಿಗೆ ಸುಲಭಗ್ರಾಹ್ಯವಾಗುವಂತೆ ನೇರ ಹಾಗೂ ನಿರ್ದಿಷ್ಟ ಶಬ್ದ, ವಾಕ್ಯ ರಚನೆ ಮತ್ತು ಗೊಂದಲರಹಿತ ಪದಪುಂಜಗಳ ಬಳಕೆಗಳುಳ್ಳ ಅನುವಾದ ಮಾಡಿದ್ದಾರೆ. ಅವರ ಈ ಅನುವಾದಗಳು ಮೂಲ ವಚನಗಳ ಅರ್ಥದ ಆಳ ವಿಸ್ತಾರಗಳಿಗೆ ಸಮರ್ಥ ಕನ್ನಡಿ.
Published On - 11:55 am, Tue, 29 December 20