ಹಾಸನ: APMC ಮತ್ತು ಭೂಸುಧಾರಣಾ ತಿದ್ದುಪಡಿ ಕಾಯ್ದೆ ಖಂಡಿಸಿ ನಾಳೆ ಕರೆಯಲಾಗಿರುವ ಕರ್ನಾಟಕ ಬಂದ್ ಕುರಿತು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ನಾಳಿನ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹಾಸನದಲ್ಲಿ ಇಂದೇ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾಳೆ ಬಂದ್ಗೆ ಬೆಂಬಲವಾಗಿ ಹೋಟೆಲ್ಗಳನ್ನ ಮುಚ್ಚದಿದ್ದರೆ ವಾಟಾಳ್ ನಾಗರಾಜ್ ವಿನೂತನ ಹೋರಾಟ ನಡೆಸಲು ಮುಂದಾಗಿದ್ದಾರೆ. ನಾಳೆ ಒಂದು ವೇಳೆ ಹೋಟೆಲ್ ಬಂದ್ ಮಾಡದಿದ್ದರೆ ಹೋಟೆಲ್ಗೆ ಹೋಗಿ, ಹೊಟ್ಟೆ ತುಂಬ ತಿನ್ನಿ. ಆದರೆ, ಬಿಲ್ ಮಾತ್ರ ಕೊಡಬೇಡಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಹೋರಾಟಗಾರರು ಹೊಟ್ಟೆ ತುಂಬ ಊಟ, ಉಪಾಹಾರ ಸೇವಿಸಿ. ಆದರೆ, ಬಿಲ್ ಕೊಡದೆ ಪ್ರತಿಭಟಿಸಿ ಅಂತಾ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ.
‘ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ರೈತರ ಹೆಸರಲ್ಲಿ’
ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ರೈತರ ಹೆಸರಿನಲ್ಲಿ. ಈಗ ರೈತರನ್ನೇ ತುಳಿಯಲು ಹೊರಟಿದ್ದಾರೆ. ರೈತರು ನಿಮ್ಮ ಗುಲಾಮರಲ್ಲ. ಅವರಿಗೆ ಅವರದ್ದೇ ಆದ ಶಕ್ತಿಯಿದೆ ಎಂದು ವಾಟಾಳ್ ತಮ್ಮ ಆಕ್ರೋಶ್ ಹೊರಹಾಕಿದ್ದಾರೆ.
ಸರ್ಕಾರ ರೈತ ವಿರೋಧಿಯಾದ ಎರಡೂ ಕಾಯ್ದೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ. ರೈತರ ಜಮೀನನ್ನ ಯಾರು ಬೇಕಾದ್ರೂ ಖರೀದಿಸಬಹುದು ಎಂದು ಕಾನೂನಾಗಿದೆ. ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ. ದೇವರಾಜ್ ಅರಸ್ ಹಾಗೂ ಶಾಂತವೇರಿ ಗೋಪಾಲಗೌಡರ ಹೋರಾಟದ ಫಲ ಭೂಸುಧಾರಣೆ ಕಾಯ್ದೆ. ಈಗ ಆ ಕಾಯ್ದೆಯನ್ನೇ ತೆಗೆಯಲು ಹೊರಟಿದ್ದಾರೆ. ಈ ಕಾಯ್ದೆ ವಾಪಸ್ ಪಡೆಯದಿದ್ದರೆ ನೀವು ನಿಮ್ಮ ಮಂತ್ರಿಮಂಡಲ ರಾಜೀನಾಮೆ ಕೊಡಬೇಕು. ಅಧಿಕಾರದಲ್ಲಿ ಇರಲು ನಿಮಗೆ ಯೋಗ್ಯತೆ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ರಾಜ್ಯದಲ್ಲಿ ಕನ್ನಡ ಪರ ಸಂಘಟನೆ ಮತ್ತು ರೈತರು ಒಂದಾಗಿ ಬಂದ್ ಮಾಡುತ್ತಿದ್ದೇವೆ. ನಾಳಿನ ಬಂದ್ ಐತಿಹಾಸಿಕ, ವಿನೂತನ ಹೋರಾಟ ಆಗಲಿದೆ. ಪೊಲೀಸರು ಹೋರಾಟ ಹತ್ತಿಕ್ಕಲು ಯತ್ನ ಮಾಡುತ್ತಿದ್ದಾರೆ. ನಾಳೆ ಬಂದ್ಗೆ ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ತೀವ್ರ ಹೋರಾಟ, ಅನಿರ್ದಿಷ್ಟಾವಧಿ ಬಂದ್ ಮಾಡೋ ಬಗ್ಗೆಯೂ ಚಿಂತನೆ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.