ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಿತ್ತಾಟ: ವೀರಪ್ಪ ಮೊಯ್ಲಿ ಅನುಭವದ ಮಾತು ಏನು?
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಿತ್ತಾಟ ಈಗ ಬೀದಿ ರಂಪವಾಗಿದೆ. ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದ ಕುರಿತು ನಡೆದ ಭಾರೀ ಚರ್ಚೆ ಮತ್ತು ಬಿಜೆಪಿ ಜತೆ ಷಾಮೀಲು ಆರೋಪ ಕುರಿತು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವರು ತಾವೇ ಹೆಚ್ಚು ನಿಷ್ಟಾವಂತರು ಎಂದು ಹೇಳಿಕೊಳ್ತಾರೆ. ಆದರೆ ಅವರಿಗಿಂತಲೂ ಹೆಚ್ಚು ನಿಷ್ಠರಾಗಿ ಮಾಜಿ ಪ್ರಧಾನಿಗಳು ಹಾಗೂ ಅಧ್ಯಕ್ಷರಾಗಿದ್ದ […]

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಿತ್ತಾಟ ಈಗ ಬೀದಿ ರಂಪವಾಗಿದೆ. ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದ ಕುರಿತು ನಡೆದ ಭಾರೀ ಚರ್ಚೆ ಮತ್ತು ಬಿಜೆಪಿ ಜತೆ ಷಾಮೀಲು ಆರೋಪ ಕುರಿತು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಕೆಲವರು ತಾವೇ ಹೆಚ್ಚು ನಿಷ್ಟಾವಂತರು ಎಂದು ಹೇಳಿಕೊಳ್ತಾರೆ. ಆದರೆ ಅವರಿಗಿಂತಲೂ ಹೆಚ್ಚು ನಿಷ್ಠರಾಗಿ ಮಾಜಿ ಪ್ರಧಾನಿಗಳು ಹಾಗೂ ಅಧ್ಯಕ್ಷರಾಗಿದ್ದ ದಿ. ಇಂದಿರಾ ಗಾಂಧಿ ಹಾಗೂ ದಿ. ರಾಜೀವ್ ಗಾಂಧಿ ಪರ ನಾವು ನಿಂತಿದ್ದೆವು. ಹಲವಾರು ಮಂದಿ ದೇವರಾಜು ಅರಸು ಪರ ಬೆಂಬಲಕ್ಕೆ ನಿಂತಿದ್ದರು. ಎಲ್ಲಾ ಸಂದರ್ಭಗಳಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ, ಇಲ್ಲದೆ ಇರಲಿ ನಾವು ಕಾಂಗ್ರೆಸ್ ಜೊತೆ ನಿಂತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಪಕ್ಷದಿಂದ ನಮಗೆ ಎಷ್ಟೇ ಅನ್ಯಾಯವಾದಾಗಲೂ ನಾವು ಪಕ್ಷದ ಪರ ನಿಂತಿದ್ದೇವೆ. ಸಾಯೋ ತನಕವೂ ಕೂಡಾ ನಾನಂತೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆ ಮುಖ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯನ್ನು ಮತ್ತು ಮೋದಿಯವರನ್ನು ನಾವು ಯಾವುದೇ ಸಂದರ್ಭದಲ್ಲೂ, ಕನಸು ಮನಸಿನಲ್ಲೂ ಒಪ್ಪಿಕೊಂಡಿಲ್ಲ. ತತ್ವ ಸಿದ್ದಾಂತ ನಂಬಿಕೊಂಡೇ ಕಾಂಗ್ರೆಸ್‌ನಲ್ಲಿ ಅಚಲವಾಗಿ ನಿಂತಿದ್ದೇನೆ ಎಂದು ಮೊಯ್ಲಿ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
2024 ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕು. ಅದಕ್ಕಾಗಿಯೇ ನಾವು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು. ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದು ನಮಗೂ ಸಂತೋಷವೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅನೇಕ ತ್ಯಾಗ ಮಾಡಿದ್ದಾರೆ. ಇಡೀ ಪಕ್ಷಕ್ಕೆ ಅವರು ಒಂಥರಾ ತಾಯಿ ಇದ್ದ ಹಾಗೆ. ತಾಯಿಗೆ ನಿಷ್ಠೆಯಿಂದ ಇರುವ ಅಚಲತೆ ನಮ್ಮದು. ಆದರೆ ನಿನ್ನೆ ನಡೆದ ಬೆಿಳವಣಿಗೆಗಳಿಂದ ನಮಗೆ ಸಾಕಷ್ಟು ನೋವು ಹಾಗೂ ದುಃಖ ಆಗಿದೆ. ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ ಎನ್ನೋ ಮಾತು ಕೇಳಿ ಬಹಳ ನೋವಾಯ್ತು. ನಿಚ್ವಳವಾದ ಸದುದ್ದೇಶದಿಂದ ನಾವು ಪತ್ರ ಬರೆದಿದ್ದು ಎಂದು ಮಾಜಿ ಕೇಂದ್ರ ಸಚಿವ, ಪಕ್ಷಕ್ಕಾಗಿ ಇಡೀ ಜೀವ ತೇದಿದ್ದೇವೆ. ಎಐಸಿಸಿ ಪತ್ರ ಲೀಕ್ ಮಾಡಿದ ಬಗ್ಗೆ ಹಾಗೂ ಸಿಡಬ್ಯೂಸಿ ಮಾಹಿತಿ ಹೊರಬಿದ್ದ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಆಮೂಲಾಗ್ರವಾದ ಬದಲಾವಣೆಯಾಗಬೇಕಿದೆಯೇ ಹೊರತು ನಾಯಕತ್ವದ ಬಗ್ಗೆ ನಮ್ಮ ಪ್ರಶ್ನೆ ಇಲ್ಲ ಎಂದು ಮೊಯ್ಲಿ, ಬಿಜೆಪಿ ಮೋಸದಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು, ಯೋಗ್ಯತೆಯಿಂದಲ್ಲ ಎಂದು ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ಬಗ್ಗೆ ನನಗಂತೂ ಪ್ರಶ್ವಾತ್ತಾಪ ಇಲ್ಲ. ಯಾಕಂದ್ರೆ ನಾನು ಆಷಾಢಭೂತಿ ಮನಃಸ್ಥಿತಿಯವನಲ್ಲ. ಹಾಗೇನೆ ಮುಖ ನೋಡಿ ಮಣೆ ಹಾಕುವವನಂತೂ ಅಲ್ಲವೇ ಅಲ್ಲ. ಪತ್ರ ಬರೆಯುವಾಗ ಅಥವಾ ಸಹೀ ಹಾಕುವಾಗಲೂ ನಾವು ಹೆದರಲಿಲ್ಲ, ಈಗಲೂ ಹೆದರಿಲ್ಲ ಎಂದು ಮಾಜೀ ಕೇಂದ್ರ ಸಚಿವ ಹಾಗೂ ಗಾಂಧಿ ಕುಟುಂಬದ ಆಪ್ತರಾಗಿದ್ದ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.