ಕುಡಿದ ಅಮಲಿನಲ್ಲಿ ವಿಮಾನ ಸಿಬ್ಬಂದಿಯ ಬೆರಳು ಕಚ್ಚಿದ ಪ್ರಯಾಣಿಕನ ವಿಡಿಯೋ ವೈರಲ್

Turkish Airlines : ಈತ ಕೇವಲ ಪ್ರಯಾಣಿಕನಷ್ಟೇ ಅಲ್ಲ, ವೃತ್ತಿಯಲ್ಲಿ ಇನ್ನೊಂದು ವಿಮಾನ ಸಂಸ್ಥೆಯ ಪೈಲಟ್​. ಆದರೆ ಕುಡಿದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡು ಜಗಳಕ್ಕೆ ಬಿದ್ದಿದ್ದಾನೆ. ಸಿಬ್ಬಂದಿಯೂ ಇವನ ಮೇಲೆ ಪ್ರತಿದಾಳಿ ಮಾಡಿದೆ.

ಕುಡಿದ ಅಮಲಿನಲ್ಲಿ ವಿಮಾನ ಸಿಬ್ಬಂದಿಯ ಬೆರಳು ಕಚ್ಚಿದ ಪ್ರಯಾಣಿಕನ ವಿಡಿಯೋ ವೈರಲ್
Drunk Passenger Bites Flight Attendant‘s Finger
Updated By: ಶ್ರೀದೇವಿ ಕಳಸದ

Updated on: Oct 18, 2022 | 1:50 PM

Viral Video : ಯಾವ ಕಾರಣಕ್ಕೆ ಯಾರು ಹೇಗೆ ಎಲ್ಲಿ ಯಾವಾಗ ಆಕ್ರೋಶಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ಊಹಿಸುವುದು ಅಸಾಧ್ಯ. ಕುಡಿದ ಮತ್ತಿನಲ್ಲಿ ವಿಮಾನವೇರಿದ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯ ಬೆರಳನ್ನು ಕಚ್ಚಿದ ಘಟನೆ ಬುಧವಾರ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪ್ರಯಾಣಿಕನನ್ನು ಇನ್ನೊಂದು ವಿಮಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇಂಡೋನೇಷಿಯಾ ಮೂಲದ ಪ್ರಜೆ ಎಂದು ಗುರುತಿಸಲಾಗಿದೆ.

ಟರ್ಕಿಶ್​ ಏರ್​ಲೈನ್ಸ್​ ವಿಮಾನವು ಜಕಾರ್ತಾಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದರಿ ಪ್ರಯಾಣಿಕ ಕುಡಿದ ಮತ್ತಿನಲ್ಲಿದ್ದುದನ್ನು ಗಮನಿಸಿದ ಸಿಬ್ಬಂದಿ ಅವನನ್ನು ಶಾಂತಗೊಳಿಸಲು ಪ್ರಯತ್ನ ನಡೆಸಿದೆ. ಆದರೆ ಆತ ನಿಯಂತ್ರಣವನ್ನು ಕಳೆದುಕೊಂಡು ಸಿಬ್ಬಂದಿಯ ಮೇಲೆ ದಾಳಿ ಮಾಡಲು ಶುರುಮಾಡಿದ್ದಾನೆ. ಆಗ ಸಿಬ್ಬಂದಿಯೂ ಅವನ ಮೇಲೆ ಪ್ರತಿದಾಳಿ ಮಾಡಿದೆ. ಈ ಸಂದರ್ಭದಲ್ಲಿಯೇ ಈತ ಸಿಬ್ಬಂದಿಯೊಬ್ಬರ ಬೆರಳನ್ನು ಕಚ್ಚಿರುವುದು.

ಪರಿಸ್ಥಿತಿಯು ವಿಕೋಪಕ್ಕೆ ತಲುಪಿದಾಗ ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಬೇಕೆಂಬ ಒತ್ತಾಯವೂ ಪ್ರಯಾಣಿಕರಿಂದ ಕೇಳಿಬಂದಿದೆ. ಜಕಾರ್ತಾ ಬದಲಾಗಿ ಮಲೇಷಿಯಾದ ಕೌಲಾಲಂಪುರಗೆ ವಿಮಾನವನ್ನು ತಿರುಗಿಸಬೇಕೆಂಬ ಒತ್ತಡವನ್ನೂ ಪೈಲಟ್​ ಮೇಲೆ ಹೇರಲಾಗಿದೆ. ಈ ಹೊಡೆದಾಟವು ನಿಯಂತ್ರಣಕ್ಕೆ ಬರದೇ ಇದ್ದಾಗ ಅನಿವಾರ್ಯವಾಗಿ ಮೇಡನ್​ನ ಕ್ವಾಲಾನಾಮು ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

 

Published On - 1:43 pm, Tue, 18 October 22