ಬಾಗಲಕೋಟೆ: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಹೀಗಾಗಿ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಮಳೆ ನೀರು ಮನೆಗಳಿಗೆ ಪ್ರವೇಶಿಸುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿ ವರ್ಷ ಮಳೆ ಬಂದಾಗಲೆಲ್ಲ ಜನ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದೇ ಯೋಜನೆಯನ್ನು ಮಾಡುತ್ತಿಲ್ಲ. ಜನರ ಸಹಾಯಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಗ್ರಾಮದ ಜನ ಸರ್ಕಾರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಹುನಗುಂದ, ಅಮರಾವತಿ, ಕರಡಿ ರಸ್ತೆ ಮಳೆ ಬಂದಾಗೆಲ್ಲ ಬಂದ್ ಆಗುತ್ತಿರುತ್ತದೆ. ಹೆದ್ದಾರಿಯ ಅಂಡರ್ ಪಾಸ್ನಲ್ಲಿ ಅಪಾರ ನೀರು ನಿಂತು ಹತ್ತಾರು ಗ್ರಾಮಗಳ ಸಂಪರ್ಕ ಬಂದ್ ಆಗುತ್ತಿದೆ.
ಜೊತೆಗೆ ಹಳ್ಳದ ನೀರು ಸೇರಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಒತ್ತಾಯ ಮಾಡಿದ್ರೂ ಸರ್ಕಾರ ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಬಂದ್ ಮಾಡಿದ್ದರಿಂದ ಅಪಾರ ಸಂಖ್ಯೆಯ ವಾಹನಗಳು ಸಾಲಿನಲ್ಲಿ ನಿಂತಿವೆ. ಟ್ರಾಫಿಕ್ ಸಮಸ್ಯೆ ಉಂಟಾಗಿದೆ.