IPL 2022: ನಾಯಕಲ್ಲ, ಆದ್ರೂ ಕಿಂಗ್ ಕೊಹ್ಲಿಗೆ ಇಂದು ವಿಶೇಷ ಪಂದ್ಯ

| Updated By: ಝಾಹಿರ್ ಯೂಸುಫ್

Updated on: Mar 27, 2022 | 2:33 PM

Virat Kohli: ಐಪಿಎಲ್‌ನಲ್ಲಿ 207 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಬ್ಯಾಟ್ ಮಾಡಿದರೆ ಒಂದೇ ಫ್ರಾಂಚೈಸಿ ಪರ ಆಡಿ 200 ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

IPL 2022: ನಾಯಕಲ್ಲ, ಆದ್ರೂ ಕಿಂಗ್ ಕೊಹ್ಲಿಗೆ ಇಂದು ವಿಶೇಷ ಪಂದ್ಯ
Virat Kohli
Follow us on

ಐಪಿಎಲ್​ನ ಮೂರನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯವು ವಿರಾಟ್ ಕೊಹ್ಲಿ (Virat Kohli) ಪಾಲಿಗೆ ತುಂಬಾ ಮಹತ್ವದ ಪಂದ್ಯವಾಗಿದೆ. ಈಗಾಗಲೇ ಐಪಿಎಲ್​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ ಸದ್ಯ 6283 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​​ಮನ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು 546 ಬೌಂಡರಿಗಳೊಂದಿಗೆ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಶಿಖರ್ ಧವನ್ ನಂತರದ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಅತ್ಯಧಿಕ ಅರ್ಧಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಷ್ಟೇ ಅಲ್ಲದೆ ಕ್ರಿಸ್ ಗೇಲ್ ನಂತರ ಅತ್ಯಧಿಕ ಶತಕಗಳನ್ನು ಬಾರಿಸಿದ ಬ್ಯಾಟ್ಸ್​ಮನ್​ಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವೆಲ್ಲದರ ನಡುವೆ ಇದೀಗ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 200 ಇನಿಂಗ್ಸ್​ ಪೂರೈಸಲು ತುದಿಗಾಲಲ್ಲಿ ನಿಂತಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ ಐಪಿಎಲ್‌ನಲ್ಲಿ 200 ಇನ್ನಿಂಗ್ಸ್‌ಗಳನ್ನು ಪೂರೈಸಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಇದುವರೆಗೆ 199 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 37.39 ಸರಾಸರಿಯಲ್ಲಿ 6283 ರನ್ ಗಳಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್​ಗಳ ವೇಳೆ ಕೊಹ್ಲಿ ಐದು ಶತಕ ಮತ್ತು 42 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ 207 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಬ್ಯಾಟ್ ಮಾಡಿದರೆ ಒಂದೇ ಫ್ರಾಂಚೈಸಿ ಪರ ಆಡಿ 200 ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಸಾಧನೆ ಮಾಡಿದ ಐಪಿಎಲ್​ನ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.

2008 ರಿಂದ ಆರ್​ಸಿಬಿ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ 2013 ರಲ್ಲಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಐಪಿಎಲ್ 2021 ಬಳಿಕ RCB ನಾಯಕತ್ವವನ್ನು ತೊರೆದ ಕೊಹ್ಲಿ ಈ ಬಾರಿ ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಮೊದಲ ಪಂದ್ಯದಲ್ಲಿ 200ನೇ ಇನಿಂಗ್ಸ್​ ಆಡುವ ಮೂಲಕ ಎಂಬುದು ವಿಶೇಷ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

(Virat Kohli’s 200th Innings match for RCB)