2008 ರಿಂದ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಶ್ರೀಮಂತ ಲೀಗ್. ಯುವ ಪ್ರತಿಭೆಗಳನ್ನು ಸ್ಟಾರ್ ಆಟಗಾರರನ್ನಾಗಿ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕೂಡ ಐಪಿಎಲ್ಗೆ ಸಲ್ಲಬೇಕು. ಅಲ್ಲದೆ ಅನೇಕ ಆಟಗಾರರು ಐಪಿಎಲ್ ಮೂಲಕ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿಯೇ ವಿಶ್ವದ ಅನೇಕ ಆಟಗಾರರು ಕೂಡ ಐಪಿಎಲ್ನಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿರುತ್ತಾರೆ.
ಅದರಂತೆ ಐಸಿಸಿ ಸ್ಥಾನಮಾನ ಹೊಂದಿರುವ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪಾಕಿಸ್ತಾನದ 11 ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಿದ್ದರು. ಹಾಗಿದ್ರೆ ಐಪಿಎಲ್ ಆಡಿದ್ದ ಪಾಕ್ ಆಟಗಾರರು ಯಾರೆಲ್ಲಾ ನೋಡೋಣ...
ಮೊಹಮ್ಮದ್ ಹಫೀಜ್: ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಮೊಹಮ್ಮದ್ ಆಸಿಫ್: ಪಾಕ್ ವೇಗಿ ಮೊಹಮ್ಮದ್ ಆಸಿಫ್ ಡೆಲ್ಲಿ ಡೇರ್ ಡೆವಿಲ್ಸ್ ಪರ 8 ಪಂದ್ಯಗಳನ್ನು ಆಡಿದ್ದರು.
ಕಮ್ರಾನ್ ಅಕ್ಮಲ್: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಸಲ್ಮಾನ್ ಬಟ್: ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಸಲ್ಮಾನ್ ಬಟ್ 2008 ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು.
ಶೋಯೆಬ್ ಅಖ್ತರ್: ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ 3 ಪಂದ್ಯಗಳನ್ನು ಆಡಿದ್ದರು.
ಶೋಯೆಬ್ ಮಲಿಕ್: ಪಾಕ್ ಆಲ್‌ರೌಂಡರ್ ಶೋಯೆಬ್ ಮಲಿಕ್ ಐಪಿಎಲ್ನಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು.
ಉಮರ್ ಗುಲ್: ಪಾಕ್ ವೇಗಿ ಉಮರ್ ಗುಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು.
ಸೊಹೈಲ್ ತನ್ವೀರ್: ಚೊಚ್ಚಲ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರನೆಂದರೆ ಸೊಹೈಲ್ ತನ್ವೀರ್. ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ತನ್ವೀರ್ ಮೊದಲ ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು.
ಮಿಸ್ಬಾ-ಉಲ್-ಹಕ್: ಅನಿಲ್ ಕುಂಬ್ಳೆ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಾಕಿಸ್ತಾನದ ಆಟಗಾರ ಮಿಸ್ಬಾ ಉಲ್ ಹಕ್ ಪ್ರತಿನಿಧಿಸಿದ್ದರು. ಅಲ್ಲದೆ ಆರ್ಸಿಬಿ ಪರ 8 ಪಂದ್ಯಗಳನ್ನು ಆಡಿದ್ದ ಮಿಸ್ಬಾ ಗಳಿಸಿದ್ದು ಒಟ್ಟಾರೆ 117 ರನ್ಗಳನ್ನು ಮಾತ್ರ.
ಯೂನಿಸ್ ಖಾನ್: 2008ರಲ್ಲಿ ಪಾಕ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಶಾಹಿದ್ ಅಫ್ರಿದಿ: ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಆಡಂ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಶಾಹಿದ್ ಅಫ್ರಿದಿ ಕಾಣಿಸಿಕೊಂಡಿದ್ದರು.
2008 ರಲ್ಲಿ ನಡೆದ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ್ ಆಟಗಾರರನ್ನು ಐಪಿಎಲ್ನಿಂದ ನಿಷೇಧಿಸಲಾಗಿತ್ತು. ಅದರಂತೆ ಪಾಕ್ ಆಟಗಾರರ ಮೇಲಿನ ಐಪಿಎಲ್ ಬ್ಯಾನ್ ಈಗಲೂ ಮುಂದುವರೆದಿದೆ.
Published On - 10:44 pm, Thu, 24 March 22