ಸದ್ಯ ಅತಿ ಹೆಚ್ಚು ಆದಾಯ, ಜನಪ್ರಿಯತೆ ಹೊಂದಿರುವ ಕ್ರಿಕೇಟರ್ ಯಾರೆಂದು ಯಾರಿಗೆ ತಾನೇ ಗೊತ್ತಿಲ್ಲ? ಈಗಷ್ಟೇ ಬ್ಯಾಟು ಬಾಲು ಹಿಡಿದಿರೋ ಪುಟ್ಟ ಮಗುವೂ ವಿರಾಟ್ ಕೊಹ್ಲಿ ಹೆಸರನ್ನೇ ಹೇಳುತ್ತೆ. ಇಂಥ ಶ್ರೀಮಂತ ಕ್ರಿಕೇಟರ್ಗೆ ಕಾರ್ಗಳ ಮೋಹವೂ ಇದ್ದೇ ಇದೆ. ಹಲವು ವರ್ಷಗಳಿಂದ ಭಾರತದಲ್ಲಿ ಆಡಿ ಕಾರುಗಳ ರಾಯಭಾರಿಯಾಗಿರುವ ಕೊಹ್ಲಿಯ ಕಾರ್ ಶೆಡ್ಗೆ, ಪ್ರತಿ ವರ್ಷವೂ ಹೊಸ ಆಡಿ ಕಾರುಗಳು ಸೇರ್ಪಡೆಯಾಗುತ್ತಲೇ ಇರುತ್ತವೆ.
ಹೀಗಿರುವಾಗ, ವಿರಾಟ್ ಕೊಹ್ಲಿಯ ಮೊದಲ ಆಡಿ ಕಾರು ಯಾವ್ದು? ಈಗಲೂ ಅದು ಕೊಹ್ಲಿ ಬಳಿಯೇ ಇದೆಯಾ? ಹೊಸ ಕಾರು ಬಂದಂತೆ ಹಳೆ ಕಾರುಗಳ ಕಥೆಯೇನು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸದಿರದು. ಹಾಗಾದ್ರೆ ಹೇಳ್ತೀವಿ ಕೇಳಿ, ವಿರಾಟ್ ಕೊಹ್ಲಿಯ ಹಳೆಯ ಆಡಿ ಕಾರೊಂದು ಮಹಾರಾಷ್ಟ್ರದ ಪೊಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಿದೆ ಎಂದರೆ ನೀವು ನಂಬಲೇಬೇಕು!
ಕೊಹ್ಲಿ ಕೈವಾಡವೇನಿಲ್ಲ..ಚಿಂತೆ ಮಾಡ್ಬೇಡಿ!
2012ರಲ್ಲಿ ಬಿಡುಗಡೆಯಾದ ಆಡಿ R8 ಕಾರನ್ನು ಕೊಹ್ಲಿ ಖರೀದಿಸಿದ್ದರು. ಅಂದಹಾಗೆ ಇದು ಕೊಹ್ಲಿಯ ಮೊದಲ ಆಡಿ ಕಾರು ಸಹ ಹೌದು. 2016ರಲ್ಲಿ ಆಡಿ ಇನ್ನೊಂದು ಮಾಡೆಲ್ ಕಾರನ್ನು ಬಿಡುಗಡೆಗೊಳಿಸಿತ್ತು. ಆಗ ಸಾಗರ್ ಥಕ್ಕರ್ ಎಂಬುವವರಿಗೆ 2.5 ಕೋಟಿಗೆ R8 ಅನ್ನು ಮಾರಿದ್ದರು ಕೊಹ್ಲಿ.
ತಮ್ಮ ಪ್ರೇಯಸಿಗಾಗಿ ಕಾರು ಖರೀದಿಸಿದ್ದ ಸಾಗರ್ ಥಕ್ಕರ್, ನಂತರ ಹಗರಣವೊಂದರಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ಅವರ ಕಾರನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಿನಿಂದ ವಿರಾಟ್ ಕಾರು ಮುಂಬೈ ಪೊಲೀಸ್ ಠಾಣೆಯಲ್ಲೇ ಧೂಳು ತಿನ್ನುತ್ತಿದೆ. ಹೀಗೆ, ಮುಂಚೆ ಕೊಹ್ಲಿ ಬಳಸುತ್ತಿದ್ದ ಆಡಿ ಕಾರಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.
Published On - 7:26 pm, Sun, 13 December 20