ಬೆಂಗಳೂರು: ಟೆಕ್ಕಿ ಕಿರುಕುಳದಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಟೆಕ್ಕಿ ಭಾಸ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪದ್ಮಾವತಿ(38) ಆತ್ಮಹತ್ಯೆಗೆ ಶರಣಾದ ಮಹಿಳೆ. ಜನವರಿ 28ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತಿಯ ಕಿರುಕುಳ ತಾಳಲಾಗದೆ ಪದ್ಮಾವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಭಾಸ್ಕರ್ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಭಾಸ್ಕರ್ಗೆ ಮದ್ಯಪಾನ, ಪರಸ್ತ್ರೀ ಸಹವಾಸದ ಚಟ ಇತ್ತು ಎಂದು ಹೇಳಲಾಗುತ್ತಿದೆ. ಪತ್ನಿ ಪದ್ಮಾವತಿ ಈ ಹಿಂದೆ 3 ಬಾರಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದ್ರೆ 4ನೇ ಬಾರಿಗೆ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಸ್ಕರ್ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದಾನೆ. 15 ವರ್ಷಗಳ ಹಿಂದೆ ಪದ್ಮಾವತಿ ಮತ್ತು ಭಾಸ್ಕರ್ ವಿವಾಹವಾಗಿದ್ರು. ದಂಪತಿಗೆ 11 ವರ್ಷದ ಮಗನಿದ್ದಾನೆ. ಭಾಸ್ಕರ್ ಅತಿಯಾಗಿ ಪಾರ್ಟಿ, ಮೋಜು ಮಸ್ತಿಗೆ ದಾಸನಾಗಿದ್ದ. ಪಾರ್ಟಿಯಲ್ಲಿ ಕುಡಿದು ಬಂದು ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಟೆಕ್ಕಿ ಪತಿಯ ಕಿರುಕುಳದಿಂದ ಬೇಸತ್ತು ಪದ್ಮಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ವರ್ತೂರು ಠಾಣೆಯಲ್ಲಿ ಟೆಕ್ಕಿ ಭಾಸ್ಕರ್ ವಿರುದ್ಧ FIR ದಾಖಲಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅನ್ಯ ಯುವತಿಯೊಂದಿಗೆ ಪತಿಯ ಪಾರ್ಟಿ ಸೆಲೆಬ್ರೇಷನ್.. ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು