ಆಗುಂಬೆ ಬಳಿ ಅಡಕೆ ಕೊನೆ ತೆಗೆಯುವಾಗ ಕತ್ತಿ ಕೈ ಜಾರಿ ಯುವಕನ ದುರ್ಮರಣ
ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ. ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ […]
ಶಿವಮೊಗ್ಗ: ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭವಾಯಿತೆಂದರೆ ಬೆಳೆಗಾರರಿಗೆ ಸಂತಸವೂ ಹೌದು, ಸಂಕಟವೂ ಹೌದು. ಈ ಭಯಕ್ಕೆ ಕಾರಣ ಅಡಕೆ ಕೊನೆಗಾರರ ತಲೆಯ ಮೇಲೆ ತೂಗುತ್ತಲೇ ಇರುವ ಅಪಾಯದ ಕತ್ತಿ. ಅಡಕೆಗೆ ಔಷಧಿ ಹೊಡೆಯುವಾಗ, ಕೊನೆ ತೆಗೆಯುವಾಗ ಮರದ ಮೇಲೆ ಕುಳಿತಿರುವವರು ಎಷ್ಟೇ ಎಚ್ಚರದಿಂದ ಇದ್ದರೂ ಕೆಲವೊಮ್ಮೆ ಜೀವಕ್ಕೇ ಕುತ್ತು ತರುವಂತಹ ಅಪಾಯ ಘಟಿಸುತ್ತವೆ.
ಕಳೆದ ಮಂಗಳವಾರ ಆಗುಂಬೆ ಬಳಿಯ ಮಲ್ಲಂದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕೊನೆಗಾರ ಅನುಷ್ ಎಂ.ಎಸ್ (19) ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರದ ಮೇಲೆ ಕುಳಿತು ಕೊನೆ ತೆಗೆಯುತ್ತಿದ್ದಾಗ ದೋಟಿ ಕೈ ಜಾರಿ, ಅದರ ತುದಿಗೆ ಕಟ್ಟಿದ್ದ ಕತ್ತಿ ಅಡಕೆ ಕೊನೆಯೊಂದಿಗೆ ರಭಸವಾಗಿ ಬಂದು ಅಪ್ಪಳಿಸಿದ ಪರಿಣಾಮ ಕುತ್ತಿಗೆಯಿಂದ ತೊಡೆಯ ಭಾಗದವರೆಗೆ ದೇಹ ಸೀಳಿಕೊಂಡು ಹೋಗಿದೆ. ಕತ್ತಿ ಹರಿತವಾಗಿದ್ದ ಕಾರಣ ಆಳವಾದ ಗಾಯಗಳಾಗಿ ಅನುಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮನೆಗೆ ಆಧಾರವಾಗಬೇಕಾಗಿದ್ದ ಮಗನ ಸಾವಿನಿಂದ ತಂದೆ ಸುಧಾಕರ್, ತಾಯಿ ಸವಿತಾ ಹಾಗೂ ಅನುಷ್ನ ಮೂವರು ಅಕ್ಕಂದಿರು ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ತೀರ್ಥಹಳ್ಳಿ ಶಾಸಕ ಹಾಗೂ ಅಡಕೆ ಟಾಸ್ಕ್ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಘಟನೆ ಸಂಭವಿಸಿದ ತಕ್ಷಣ ನನಗೆ ಮಾಹಿತಿ ಲಭ್ಯವಾಗಿದೆ. ಚಿಕ್ಕ ವಯಸ್ಸಿನ ಹುಡುಗ ಹೀಗೆ ಜೀವ ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ. ಮ್ಯಾಮ್ಕೋಸ್ನಲ್ಲಿ ಅವರ ಶೇರ್ ಇಲ್ಲದ ಕಾರಣ ತಕ್ಷಣ ಪರಿಹಾರ ಬಿಡುಗಡೆ ಮಾಡುವುದು ಸಾಧ್ಯವಾಗಿಲ್ಲ. ಅದೇನೇ ಅಡೆತಡೆ ಇದ್ದರೂ ಮ್ಯಾಮ್ಕೋಸ್ ಹಾಗೂ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದರು.