ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ವಿಶೇಷವಾಗಿ ಬೇಸಿಗೆಯಲ್ಲಿ. ಇದು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾದ ಅಗತ್ಯ ಪೋಷಕಾಂಶಗಳು ಮತ್ತು ವಿಟಮಿನ್ ಗಳಿಂದ ಕೂಡಿದೆ. ಹಾಗಾಗಿ ತಜ್ಞರು ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವನೆ ಮಾಡಲು ಶಿಫಾರಸು ಮಾಡುತ್ತಾರೆ. ಇಂತಹ ಅದ್ಭುತ ಆರೋಗ್ಯ ಪ್ರಯೋಜನವನ್ನು ಹೊಂದಿರುವ ಎಳನೀರು ಬಹುತೇಕ ಎಲ್ಲರಿಗೂ ಇಷ್ಟ. ಆದರೆ ಬೀದಿಬದಿಯಲ್ಲಿ ಸಿಗುವ ಅಧಿಕ ನೀರಿರುವ ಕೆನೆಭರಿತ ಸೀಯಾಳವನ್ನು ಖರೀದಿಸುವುದು ಸವಾಲಿನ ಸಂಗತಿಯಾಗಿದೆ. ಕೆಲವೊಂದು ಬಾರಿ ಗಾತ್ರದಲ್ಲಿ ದೊಡ್ಡದಾಗಿರುವ ಸೀಯಾಳವು ಕಡಿಮೆ ನೀರನ್ನು ಹೊಂದಿರುತ್ತದೆ, ಇನ್ನೂ ಕೆಲವು ಬಾರಿ ಎಳೆಯ ಸೀಯಾಳ ಎಂದು ಖರೀದಿಸಿದರೆ ಅದು ಮಾಗಿ ತೆಂಗಿನಕಾಯಿಯಂತಾಗಿರುತ್ತವೆ. ಹೀಗೆ ಒಂದು ಸೀಯಾಳವನ್ನು ಖರೀದಿಸಬೇಕಾದರೆ ಅಳೆದು ತೂಗಬೇಕಾಗುತ್ತದೆ. ಹಾಗಾಗಿ ಈ ಕೆಲವು ಸರಳ ತಂತ್ರವನ್ನು ಬಳಸಿ ಅಧಿಕ ನೀರಿರುವ ಎಳನೀರನ್ನು ಖರೀದಿಸಬಹುದು.
ಸೀಯಾಳವನ್ನು ಖರೀದಿಸುವ ಮೊದಲು ನೀವು ಯಾವಾಗಲೂ ಅದರ ಸಿಪ್ಪೆಯನ್ನು ಪರೀಕ್ಷಿಸಬೇಕು. ಕೆನೆಭರಿತ ಮತ್ತು ನೀರಿರುವ ಎಳನೀರು ಹಸಿರು ಸಿಪ್ಪೆಯನ್ನು ಹೊಂದಿರುತ್ತದೆ. ಸಿಪ್ಪೆಯಲ್ಲಿ ಯಾವುದೇ ಹಾನಿಯಾಗಿ ಕಂದು ಬಣ್ಣಕ್ಕೆ ತಿರುಗಿದ್ದರೆ ಅದು ಉತ್ತಮ ಗುಣಮಟ್ಟದ್ದಲ್ಲ ಎಂಬುದರ ಸೂಚಕವಾಗಿದೆ. ನೀವು ಸಂಪೂರ್ಣವಾಗಿ ಹಸಿರು ಬಣ್ಣ ಹೊಂದಿರುವ ಸೀಯಾಳವನ್ನು ಹುಡುಕಲು ಸಾಧ್ಯವಾಗದಿದ್ದರೆ, ಕಡಿಮೆ ಪ್ರಮಾಣದ ಬಣ್ಣ ಹೊಂದಿರುವ ಸೀಯಾಳ ಆಯ್ಕೆ ಮಾಡಿ, ಏಕೆಂದರೆ ಅದು ತಾಜಾವಾಗಿರುತ್ತದೆ. ಹಾಗೆಯೇ ದಟ್ಟವಾದ ಕಂದು ಸಿಪ್ಪೆಯನ್ನು ಹೊಂದಿದ್ದರೆ, ಅದು ಮಾಗಿ ತೆಂಗಿನಕಾಯಿಯ ರೂಪಕ್ಕೆ ತಿರುಗುತ್ತಿದೆ ಎಂದರ್ಥ, ಅದರಲ್ಲಿನ ನೀರು ಅಷ್ಟೊಂದು ತಾಜಾ ಮತ್ತು ರುಚಿಕವಾಗಿರುವುದಿಲ್ಲ.
ಸೀಯಾಳ ಗಾತ್ರದಲ್ಲಿ ತುಂಬಾ ಚಿಕ್ಕದಿರದಂತೆ ನೋಡಿಕೊಳ್ಳಿ. ಯಾಕೆಂದರೆ ಅವುಗಳಲ್ಲಿ ಅಷ್ಟೇನು ನೀರಿರುವುದಿಲ್ಲ. ಗಾತ್ರದಲ್ಲಿ ದೊಡ್ಡವಿರುವ ಎಳನೀರು ಎಂದರೆ ಅದರಲ್ಲಿ ಹೆಚ್ಚು ನೀರು ಇದೆ ಎಂದರ್ಥವಲ್ಲ. ಗಾತ್ರದಲ್ಲಿ ದೊಡ್ಡದಾಗಿರುವ ಸೀಯಾಳದಲ್ಲೂ ನೀರಿನಾಂಶ ಕಡಿಮೆ ಇರುತ್ತದೆ. ಆದ್ದರಿಂದ ಯಾವಾಗಲೂ ಮಧ್ಯಮ ಗಾತ್ರದ ಸೀಯಾಳವನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿರುತ್ತದೆ ಮತ್ತು ಅದು ಕೆನೆಭರಿತವಾಗಿರುತ್ತದೆ.
ಇದನ್ನೂ ಓದಿ: Breakfast Tips: ಬೆಳಗಿನ ಉಪಹಾರ ಸೇವನೆಯಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ
ತೆಂಗಿನ ಮರದಲ್ಲಿ ಎಳನೀರು ಚಿಕ್ಕದಾಗಿ ದುಂಡಾಗಿ ಬೆಳೆಯಲು ಪ್ರಾರಂಭವಾಗುತ್ತವೆ. ಅವುಗಳು ಬೆಳೆಯುತ್ತಾ ಹೋದಂತೆ ಅದು ಆಕಾರದಲ್ಲಿ ಉದ್ದವಾಗಲು ಪ್ರಾರಂಭವಾಗುತ್ತದೆ. ದೊಡ್ಡ ಗಾತ್ರದ ಸೀಯಾಳದಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ಯಾವಾಗಲೂ ದುಂಡಗಿನ ಸೀಯಾಳವನ್ನು ಆರಿಸಿಕೊಳ್ಳುವುದು ಉತ್ತಮ.
ಸೀಯಾಳವನ್ನು ಅಲುಗಾಡಿಸುವುದರ ಮೂಲಕ ಅದರಲ್ಲಿನ ನೀರಿನಾಂಶವನ್ನು ಪರೀಕ್ಷಿಸಬಹುದು. ಸೀಯಾಳವನ್ನು ನಿಮ್ಮ ಕಿವಿಯ ಹತ್ತಿರ ಹಿಡಿದುಕೊಳ್ಳಿ ಮತ್ತು ಅದನ್ನು ಬಲವಾಗಿ ಅಲ್ಲಾಡಿಸಿ. ಸುತ್ತಲೂ ನೀರು ಹರಿಯುವ ಶಬ್ಧ ನೀವು ಕೇಳುತ್ತೀರಾ? ಹೌದು ಎಂದಾದರೆ, ಅದು ಒಳ್ಳೆಯ ಸಂಕೇತವಲ್ಲ. ಅಧಿಕ ನೀರಿನಾಂಶವಿರುವ ಸೀಯಾಳದಲ್ಲಿ ನೀರು ತುಂಬಿರುವುದರಿಂದ ಅದು ಯಾವುದೇ ಸದ್ದು ಮಾಡುವುದಿಲ್ಲ. ಆದುದರಿಂದ ಎಳನೀರನ್ನು ಒಂದು ಬಾರಿ ಅಲ್ಲಾಡಿಸಿ ಅದರಲ್ಲಿ ನೀರು ಹರಿಯುವ ಶಬ್ದ ಕೇಳಿಲ್ಲವೆಂದಾದರೆ ಮಾತ್ರ ಅಂತಹ ಎಳನೀರನ್ನು ಖರೀದಿಸಿ.
ತೆಂಗಿನಕಾಯಿಯನ್ನು ಖರೀದಿಸುವಾಗ, ನೀವು ಯಾವಾಗಲೂ ಅವುಗಳ ತೂಕವನ್ನು ಪರೀಕ್ಷಿಸಬೇಕು. ಕೆನೆಭರಿತವಾದ ಮತ್ತು ಅಧಿಕ ನೀರಿರುವ ತೆಂಗಿನಕಾಯಿಯು ನೀರಿನಿಂದ ತುಂಬಿರುವುದರಿಂದ ಸ್ವಾಭಾವಿಕವಾಗಿ ಭಾರವಾಗಿರುತ್ತದೆ. ಅದು ತುಂಬಾ ಹಗುರವಾಗಿದ್ದರೆ, ಅದರೊಳಗೆ ನೀರು ಇಲ್ಲ ಎಂದು ಅರ್ಥ. ಹಾಗಾಗಿ ಯಾವಾಗಲೂ ತೂಕದಲ್ಲಿ ಭಾರವಾಗಿರುವ ಎಳನೀರನ್ನು ಖರೀದಿಸುವುದು ಉತ್ತಮ.