ಜೀವನವೆಂದರೆ ಸುಖ ದುಃಖಗಳ ಮಿಶ್ರಣ. ಬದುಕಿನಲ್ಲಿ ಸದಾ ಖುಷಿಯಾಗಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಕಹಿ ಘಟನೆಗಳಿಂದ ನೋವಾಗಬಹುದು. ಆದರೆ ಈ ಖುಷಿ, ನೋವನ್ನು ಹಂಚಿಕೊಳ್ಳಲು ಪ್ರತಿಯೊಬ್ಬರ ಒಂದಿಬ್ಬರಾದರೂ ಆತ್ಮೀಯರು ಇದ್ದೆ ಇರುತ್ತಾರೆ. ಒಂದು ವೇಳೆ ಪುರುಷರ ಜೀವನದಲ್ಲಿ ಈ ಗುಣವುಳ್ಳ ಮೂವರು ವ್ಯಕ್ತಿಗಳಿದ್ದು ಬಿಟ್ಟರೆ ಅವರಷ್ಟು ಅದೃಷ್ಟಶಾಲಿಗಳು ಯಾರಿಲ್ಲವಂತೆ. ಈ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ಹೀಗಾಗಿ ಅವರನ್ನು ಎಂದಿಗೂ ದೂರ ತಳ್ಳಬಾರದು, ಆದ್ದರಿಂದ ಈ ವ್ಯಕ್ತಿಗಳು ಜೀವನದಲ್ಲಿ ತುಂಬಾನೇ ಮುಖ್ಯ ಎಂದಿದ್ದಾನೆ.
ತನ್ನನ್ನು ಕೈಹಿಡಿಯುವ ಹೆಣ್ಣು, ಉತ್ತಮ ಗುಣ ನಡತೆ, ಹೊಂದಾಣಿಕೆ ಸ್ವಭಾವ ಹಾಗೂ ಸಂಸ್ಕಾರವಂತಳಾಗಿರಬೇಕೆಂದು ಗಂಡು ಬಯಸುವುದು ಸಹಜ. ಆದರೆ ಚಾಣಕ್ಯನು ಕೂಡ ತನ್ನ ನೀತಿಯಲ್ಲಿ ಸಂಸ್ಕಾರವಂತ ಹೆಂಡತಿಯೂ ಸಿಕ್ಕರೆ ಅಂತಹ ಪುರುಷನು ಅದೃಷ್ಟವಂತ ಎಂದಿದ್ದಾನೆ. ಈ ಗುಣವುಳ್ಳ ಹೆಂಡತಿ ತನ್ನ ಗಂಡನಿಗೆ ಸದಾ ನೆರಳಾಗಿರುತ್ತಾಳೆ. ಕಷ್ಟ-ಸುಖದಲ್ಲಿ ಗಂಡನ ಜೊತೆಯಾಗಿದ್ದು, ಸದಾ ಧೈರ್ಯವನ್ನು ತುಂಬುತ್ತಾಳೆ. ಯಾವುದೇ ಕಾರಣಕ್ಕೆ ಇಂತಹ ಪತ್ನಿಯನ್ನು ದೂರ ಮಾಡಿಕೊಳ್ಳಬೇಡಿ. ಒಳ್ಳೆಯ ಹೆಂಡತಿ ಗಂಡಿನ ಬದುಕನ್ನು ಸ್ವರ್ಗವಾಗಿಸುತ್ತಾಳೆ. ಅದೇ ಕೆಟ್ಟ ಗುಣವುಳ್ಳ ಪತ್ನಿಯಿಂದ ಬದುಕು ನರಕವಾಗಿಸುತ್ತಾಳೆ ಎಂದು ಚಾಣಕ್ಯ ಎಚ್ಚರಿಸಿದ್ದಾನೆ.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ಬಾರದಂತೆ ಬೆಳೆಸುತ್ತಾರೆ. ಅಷ್ಟೇ ಅಲ್ಲದೆ ಒಳ್ಳೆಯ ಗುಣಗಳೊಂದಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಬೇಕು. ಎಲ್ಲಾ ಸಂದರ್ಭದಲ್ಲಿ ಮಕ್ಕಳು ಜೊತೆಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಬೆಳೆಸುವಾಗ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಸದ್ಗುಣವನ್ನು ಹೊಂದಿರುವ ಮಕ್ಕಳು ಪೋಷಕರಿಗೆ ವಯಸ್ಸಾದ ಕಾಲ ಘಟ್ಟದಲ್ಲಿ ಚೆನ್ನಾಗಿ ನೋಡಿಕೊಳ್ಳುವ ತಂದೆ ತಾಯಿಯ ಸೇವೆ ಮಾಡುತ್ತಾರೆ. ಕೆಟ್ಟ ಚಟಗಳನ್ನು ಹೊಂದಿರದ ಮಕ್ಕಳು ಪೋಷಕರನ್ನು ಎಂದಿಗೂ ಕೈ ಬಿಡುವುದಿಲ್ಲ. ಒಂದು ವೇಳೆ ಅಂತಹ ಮಕ್ಕಳಿದ್ದರೆ ನೀವು ಅದೃಷ್ಟವಂತರು ಎನ್ನುತ್ತಾನೆ ಚಾಣಕ್ಯ.
ಈಗಿನ ಕಾಲದಲ್ಲಿ ಒಳ್ಳೆಯ ಗುಣವುಳ್ಳ ಸ್ನೇಹಿತ ಸಿಗುವುದೇ ಕಷ್ಟ. ಅಂತಹ ಗೆಳೆಯರು ಜೊತೆಗಿದ್ದರೆ ಅದುವೇ ದೊಡ್ಡ ಶಕ್ತಿ. ಒಳ್ಳೆಯ ಗುಣವುಳ್ಳ ವ್ಯಕ್ತಿಯ ಜೊತೆಗೆ ಸ್ನೇಹ ಮಾಡಿದ್ದಲ್ಲಿ ನಮಗೂ ಕೂಡ ಒಳ್ಳೆಯದೇ ಆಗುತ್ತದೆ. ಆ ಸ್ನೇಹಿತನು ನಮ್ಮ ಯಶಸ್ಸಿನಲ್ಲಿ ತನ್ನ ಖುಷಿಯನ್ನು ಕಾಣುತ್ತಾನೆ. ಒಬ್ಬ ಉತ್ತಮ ಸ್ನೇಹಿತ ಯಾವತ್ತಿಗೂ ತಪ್ಪು ಹೆಜ್ಜೆ ಇಡಲು ಬಿಡುವುದಿಲ್ಲ. ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುವ ಸ್ನೇಹಿತರನ್ನು ಎಂದಿಗೂ ಕಳೆದುಕೊಳ್ಳಬೇಡಿ. ಅವರನ್ನು ಕಳೆದುಕೊಂಡರೆ ಜೀವನದಲ್ಲಿ ನಷ್ಟ ಅನುಭವಿಸಿದಂತಾಗುತ್ತದೆ. ಮತ್ತೆ ಆ ಪರಿಶುದ್ಧ ಸ್ನೇಹವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಿತವನ್ನೇ ಬಯಸುವ ಸ್ನೇಹಿತರು ಸಿಕ್ಕರೆ ನಿಜಕ್ಕೂ ನೀವು ಅದೃಷ್ಟವಂತರು ಎಂದು ತಿಳಿಸಿದ್ದಾನೆ ಚಾಣಕ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Tue, 26 November 24