Kitchen Hacks : ಕಾಫಿ ಪುಡಿಯನ್ನು ತಿಂಗಳುಗಳ ಕಾಲ ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಯಾವುದೇ ಋತುವಿರಲಿ, ಕಾಫಿ ಮತ್ತು ಟೀ ಪುಡಿಗಳನ್ನು ತಾಜಾವಾಗಿ ಇಡುವುದು ತುಂಬಾ ಕಷ್ಟದ ಕೆಲಸ. ಸಂಗ್ರಹಣೆಯ ವೇಳೆ ಸಣ್ಣ ತಪ್ಪಾದರೂ ತಾಜಾ ಕಾಫಿ ಪುಡಿಯೂ ಹಾಳಾಗಬಹುದು. ಈ ಕಾಫಿ ಪುಡಿಯನ್ನು ಸರಿಯಾಗಿ ಶೇಖರಿಸಿಡದಿದ್ದರೆ, ಅದರ ರಚನೆ, ವಾಸನೆ ಮತ್ತು ರುಚಿಯೇ ಬದಲಾಗಿ ಬಿಡುತ್ತದೆ. ಹೀಗಾಗಿ ಈ ಪುಡಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸುವುದು ಅತ್ಯಗತ್ಯ.
ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕೆಲವರಂತೂ ದಿನಕ್ಕೆ ಮೂರೊತ್ತು ಕಾಫಿ ಕೊಟ್ಟರೂ ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಅದರಲ್ಲಿಯೂ ಈ ಬೆಳಗ್ಗಿನ ಉಪಾಹಾರದ ಬಳಿಕ ಕುಡಿಯುವ ಒಂದು ಲೋಟ ಕಾಫಿಯೂ ಆ ದಿನವನ್ನೆಲ್ಲಾ ಉಲ್ಲಾಸ ಭರಿತವಾಗಿರಿಸುತ್ತದೆ. ಆದರೆ ಎಷ್ಟೋ ಜನರಿಗೆ ಕಾಫಿ ಪುಡಿಯನ್ನು ಹೇಗೆ ಸಂಗ್ರಹಿಸಿಡಬೇಕೆಂಬುದು ತಿಳಿದಿಲ್ಲ. ಕಾಫಿ ಪುಡಿಯನ್ನು ಸರಿಯಾಗಿ ಶೇಖರಿಸಿಡದಿದ್ದರೆ, ಪುಡಿಯೂ ಹಾಳಾಗಿ ಬಿಸಾಡಬೇಕಾಗುತ್ತದೆ. ಹೆಚ್ಚು ದಿನಗಳವರೆಗೂ ಕಾಫಿ ಪುಡಿ ಕೆಡಬಾರದು ಎಂದರೆ ಈ ಸಲಹೆಗಳನ್ನು ಪಾಲಿಸಿ.
- ಕಾಫಿ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಡಬ್ಬದೊಳಗೆ ಗಾಳಿ ಹೋದರೆ ಕಾಫಿ ಪುಡಿಯ ರುಚಿ, ವಾಸನೆ, ಫುಡಿ ಗಟ್ಟಿಯಾಗಿ ರುಚಿಯೂ ಬದಲಾಗುತ್ತದೆ.
- ಕಾಫಿ ಪುಡಿಯನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ, ಮುಚ್ಚಳವು ಬಿಗಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಕಾಫಿ ಪುಡಿಯೂ ಗಟ್ಟಿಯಾಗುತ್ತದೆ.
- ಕಾಫಿ ಪುಡಿಯ ಡಬ್ಬಿಯನ್ನು ಯಾವಾಗಲೂ ತಂಪಾದ, ಗಾಢವಾದ ಸ್ಥಳದಲ್ಲಿ ಇರಿಸುವುದು ಬಹಳ ಮುಖ್ಯ. ಶಾಖ ಮತ್ತು ಸೂರ್ಯನ ಬೆಳಕಿನಿಂದ ದೂರವಿಡಿ ಹಾಗೂ ಶಾಖವನ್ನು ಉತ್ಪಾದಿಸುವ ಇತರ ವಸ್ತುಗಳ ಬಳಿ ಕಾಫಿ ಪುಡಿಯನ್ನು ಸಂಗ್ರಹಿಸುವುದನ್ನು ತಪ್ಪಿಸಿ.
- ತೇವಾಂಶವು ಕಾಫಿ ಪುಡಿಯ ರುಚಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸುವುದು ಸರಿಯಲ್ಲ. ಆದ್ದರಿಂದ ಕಾಫಿ ಪುಡಿಯನ್ನು ಶುಷ್ಕ ವಾತಾವರಣದಲ್ಲಿ ಇರಿಸುವುದು ಬಹಳ ಮುಖ್ಯ.
- ಕಾಫಿ ಬೀಜದಿಂದ ಪೌಡರ್ ತಯಾರಿಸಿ ಬಳಸುತ್ತಿದ್ದರೆ ತಿಂಗಳೊಳಗೆ ಈ ಕಾಫಿ ಪೌಡರ್ ನ್ನು ಬಳಸಿ. ಅದಲ್ಲದೇ, ಸಾಧ್ಯವಾದರೆ 15 ದಿನದೊಳಗೆ ಕಾಫಿ ಪೌಡರ್ ಖಾಲಿ ಮಾಡಿ.
- ಮಾರುಕಟ್ಟೆಯಲ್ಲಿ ಕಾಫಿ ಪುಡಿಯನ್ನು ಖರೀದಿಸುವಾಗ, ಪ್ಯಾಕೆಟ್ ಮೇಲೆ ನಮೂದಿಸಿರುವ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ. ಮುಕ್ತಾಯದ ದಿನಾಂಕ ಮೀರಿದ್ದರೆ ಅದನ್ನು ಖರೀದಿಸದಿರುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ