ಚಾಣಕ್ಯ ನೀತಿ
Image Credit source: Pinterest
ಆಚಾರ್ಯ ಚಾಣಕ್ಯರು (Acharya Chanakya) ತನ್ನ ನೀತಿಶಾಸ್ತ್ರದಲ್ಲಿ ಧರ್ಮ, ರಾಜಕೀಯ ಮಾತ್ರವಲ್ಲದೆ ಸಮಾಜಕ್ಕೆ, ಜನರಿಗೆ ಮಾರ್ಗದರ್ಶನ ನೀಡುವಂತಹ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಹೌದು ನಾವು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಎಂತಹ ವ್ಯಕ್ತಿಗಳ ಸಹವಾಸ ಮಾಡಬಾರದು, ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು, ವಿದ್ಯೆಯ ಮಹತ್ವ, ವೃತ್ತಿ ಜೀವನ, ಶತ್ರು-ಮಿತ್ರ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಈ ಒಂದಷ್ಟು ಜನ ಭೂಮಿಗೆ ಭಾರ ಎಂಬುದನ್ನು ಸಹ ಹೇಳಿದ್ದಾರೆ. ಸಾಮಾನ್ಯವಾಗಿ ನಾವು ಪದೇ ಪದೇ ಕೆಟ್ಟ ಕೆಲಸಗಳನ್ನು ಮಾಡುವವರನ್ನು, ಇತರರ ನೆಮ್ಮದಿ ಕೆಡಿಸುವವರನ್ನು ಭೂಮಿಗೆ ಭಾರ ಕೂಳಿಗೆ ದಂಡ ಅನ್ನುತ್ತೇವಲ್ವಾ. ಆದ್ರೆ ನಿಜವಾಗ್ಲೂ ದಂಡಪಿಂಡಗಳು ಯಾರು ಗೊತ್ತಾ? ಈ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ನೋಡಿ.
ಚಾಣಕ್ಯರ ಪ್ರಕಾರ ಇಂತಹ ವ್ಯಕ್ತಿಗಳು ಭೂಮಿಗೆ ಭಾರ:
- ಆಚಾರ್ಯ ಚಾಣಕ್ಯ ಹೇಳುವಂತೆ ಅಧ್ಯಯನವನ್ನು ತಪ್ಪಿಸುವ ಮತ್ತು ಜ್ಞಾನವನ್ನು ಪಡೆಯಲು ನಿರಾಕರಿಸುವ ವ್ಯಕ್ತಿಯು ಭೂಮಿಗೆ ಭಾರ. ಶಿಕ್ಷಣವು ನಮ್ಮನ್ನು ಉತ್ತಮ ಮನುಷ್ಯರಾಗಲು ಸಹಾಯ ಮಾಡುತ್ತದೆ. ಆದರೆ ಶಿಕ್ಷಣವನ್ನು ದೂರ ಉಳಿಯುವ ವ್ಯಕ್ತಿ ಎಂದಿಗೂ ಜ್ಞಾನವನ್ನು ಸಂಪಾದಿಸಲಾರ. ಆತ ಕೊನೆಯವರೆಗೂ ದಂಡಪಿಂಡನಾಗಿಯೇ ಇರುತ್ತಾನೆ.
- ತಾನು ಗಳಿಸಿದ ಸಂಪತ್ತನ್ನು ಒಳ್ಳೆಯ ಉದ್ದೇಶಗಳಿಗಾಗಿ ಬಳಸದ ಅಥವಾ ದಾನ ಮಾಡದ ವ್ಯಕ್ತಿಯನ್ನು ಆಚಾರ್ಯ ಚಾಣಕ್ಯ ಭೂಮಿಗೆ ಹೊರೆ ಎಂದು ಪರಿಗಣಿಸಿದ್ದಾರೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಅಗತ್ಯವಿರುವವರಿಗೆ ದಾನವನ್ನೂ ಮಾಡಬೇಕು.
- ಇತರರೊಂದಿಗೆ ಕೆಟ್ಟದಾಗಿ ವರ್ತಿಸುವ ಮತ್ತು ನಿರಂತರವಾಗಿ ಕಟುವಾಗಿ ಮಾತನಾಡುವ, ಯಾವಾಗ್ಲೂ ಕೆಟ್ಟ ಬೈಗುಳಗಳನ್ನಾಡುವ ವ್ಯಕ್ತಿಯನ್ನು ಯಾರು ಇಷ್ಟಪಡುವುದಿಲ್ಲ. ಬದಲಾಗಿ ಆತನನ್ನು ಕಿರಿಕಿರಿ ಎಂದು ಭಾವಿಸುತ್ತಾರೆ. ಇಂತಹ ವ್ಯಕ್ತಿಗಳು ಕೂಡಾ ದಂಡಪಿಂಡಗಳು ಎನ್ನುತ್ತಾರೆ ಚಾಣಕ್ಯ.
- ಚಾಣಕ್ಯರ ಪ್ರಕಾರ ಇತರರ ಬಗ್ಗೆ ಅಸೂಯೆ ಮತ್ತು ದ್ವೇಷದ ಭಾವನೆಗಳನ್ನು ಹೊಂದಿರುವ, ಸ್ವಾರ್ಥಿ ವ್ಯಕ್ತಿಯು ಸಹ ಭೂಮಿಗೆ ಭಾರವಾಗಿಯೇ ಇರುತ್ತಾನೆ.
- ಆಚಾರ್ಯ ಚಾಣಕ್ಯರು ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸದ ವ್ಯಕ್ತಿಯನ್ನು ಭೂಮಿಗೆ ಭಾರ ಎಂದು ಹೇಳಿದ್ದಾರೆ. ಅಲ್ಲದೆ ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸದ ವ್ಯಕ್ತಿಗೆ ದೇವರ ಆಶೀರ್ವಾದ ಎಂದಿಗೂ ಸಿಗುವುದಿಲ್ಲ, ಅಂತಹ ವ್ಯಕ್ತಿ ಯಾವತ್ತಿದ್ದರೂ ಭೂಮಿಗೆ ಭಾರ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ