
ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸನ್ನು (success) ಸಾಧಿಸಬೇಕು ಎಂದು ಬಯಸುತ್ತಾರೆ. ಈ ಯಶಸ್ಸು ಎನ್ನುವುದು ಸುಲಭವಾಗಿ ಸಿಗುವುದಿಲ್ಲ, ಸಾಕಷ್ಟು ಸವಾಲುಗಳು, ಕಷ್ಟಗಳು ಎದುರಾಗುತ್ತವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸಿ ಮುಂದೆ ಸಾಗಿದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಆದರೆ ಹೆಚ್ಚಿನವರು ಕಷ್ಟ ಬಂದಾಗ ಹೆದರಿ ಓಡಿ ಹೋಗುತ್ತಾರೆ, ಹೀಗೆ ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಇದರ ಬದಲಾಗಿ ಎದುರಾಗುವ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಜಯಿಸಲು ಈ ಒಂದಷ್ಟು ಗುಣಗಳನ್ನು ಅಳವಡಿಸಿಕೊಳ್ಳಿ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಆ ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ವಯಂ ನಿಯಂತ್ರಣ: ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲ ವ್ಯಕ್ತಿಗೆ ವಿಧಿ ಕೂಡ ಶರಣಾಗುತ್ತದಂತೆ. ತನ್ನ ಭಾವನೆಗಳು, ಆಸೆಗಳು ಮತ್ತು ನಡವಳಿಕೆಯನ್ನು ಸರಿಯಾಗಿ ನಿಯಂತ್ರಿಸಬಲ್ಲ ವ್ಯಕ್ತಿ ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತಾನೆ ಎನ್ನುತ್ತಾರೆ ಚಾಣಕ್ಯ. ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಯು ಕಠಿಣ ಸಂದರ್ಭದಲ್ಲಿಯೂ ಶಾಂತವಾಗಿರುವ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಹಾಗಾಗಿ ಸ್ವಯಂ ನಿಯಂತ್ರಣ ಅತ್ಯಗತ್ಯ.
ಜ್ಞಾನ ಮತ್ತು ವಿದ್ಯೆ: ಆಚಾರ್ಯ ಚಾಣಕ್ಯರ ಪ್ರಕಾರ, ಜ್ಞಾನವು ನಿಮ್ಮ ಶಕ್ತಿಯಾಗಿದ್ದು, ಇದರಿಂದ ನೀವು ಯಾವುದೇ ಕಷ್ಟಕರ ಸಂದರ್ಭವನ್ನೂ ಬೇಕಾದರೂ ಸುಲಭವಾಗಿ ನಿಭಾಯಿಸಬಹುದು. ಜ್ಞಾನವುಳ್ಳ ವ್ಯಕ್ತಿಯು ಪ್ರತಿಯೊಂದು ಸನ್ನಿವೇಶದಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಮತ್ತು ಆತನ ಜ್ಞಾನವು ಪ್ರಪಂಚದ ಸವಾಲುಗಳನ್ನು ಎದುರಿಸಲು ಆತನನ್ನು ಸಬಲಗೊಳಿಸುತ್ತದೆ. ಹಾಗಾಗಿ ಲೋಕ ಜ್ಞಾನವನ್ನು ಬೆಳೆಸಿಕೊಳ್ಳಿ ಖಂಡಿತವಾಗಿಯೂ ನೀವು ಯಶಸ್ಸನ್ನು ಸಾಧಿಸಬಹುದು.
ತಾಳ್ಮೆ: ಜೀವನದಲ್ಲಿ ಯಶಸ್ಸಿಗೆ ತಾಳ್ಮೆ ಅತ್ಯಗತ್ಯ. ತಾಳ್ಮೆಯಿಲ್ಲದಿದ್ದರೆ, ಸಣ್ಣ ಸಮಸ್ಯೆಗಳು ಸಹ ದೊಡ್ಡದಾಗಿ ಕಾಣುತ್ತವೆ ಎಂದು ಚಾಣಕ್ಯ ಹೇಳುತ್ತಾರೆ. ಅಲ್ಲದೆ ತಾಳ್ಮೆಯಿಂದ ಇರುವ ವ್ಯಕ್ತಿ ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸಹ ತನ್ನ ಗುರಿಯ ಮೇಲೆಯೇ ಇರುತ್ತದೆ. ಆತನ ದೃಢತೆ ಆತನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದ್ದರಿಂದ, ತಾಳ್ಮೆ ಎನ್ನುವಂತಹದ್ದು ಮನುಷ್ಯನಿಗೆ ತುಂಬಾ ಮುಖ್ಯ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಈ 5 ನಿಯಮಗಳನ್ನು ಪಾಲಿಸಿದರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರುತ್ತಾಳೆ
ಧೈರ್ಯ ಮತ್ತು ನಿರ್ಭಯತೆ: ಧೈರ್ಯ ಮತ್ತು ನಿರ್ಭೀತಿಯಿಂದ ಇರುವವರು ಮಾತ್ರ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ. ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಈ ಗುಣಗಳನ್ನು ಹೊಂದಿದ್ದರೆ, ಆತ ಜೀವನದಲ್ಲಿ ಯಶಸ್ಸು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಧೈರ್ಯವು ಪ್ರತಿಯೊಂದು ಕಷ್ಟವನ್ನೂ ನಿವಾರಿಸಲು ಆತನಿಗೆ ಸಹಾಯ ಮಾಡುತ್ತದೆ. ಹಾಗಾಗಿ ಈ ಗುಣವನ್ನು ನೀವು ಬೆಳೆಸಿಕೊಳ್ಳಿ.
ಜವಾಬ್ದಾರಿ: ತಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳುವ, ಸಮರ್ಥವಾಗಿ ನಿಭಾಯಿಸುವ ವ್ಯಕ್ತಿಯನ್ನು ನೈತಿಕ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಬೇಜವಾಬ್ದಾರಿತನದಿಂದ ಇರುವವರು ಸಮರ್ಥವಾಗಿ ಕಷ್ಟವನ್ನು ಸಹ ಎದುರಿಸಲಾರರು ಜೊತೆಗೆ ಜೀವನದಲ್ಲಿ ಯಶಸ್ಸನ್ನು ಸಹ ಸಾಧಿಸಲಾರರು. ಹಾಗಾಗಿ ಪ್ರತಿಯೊಂದು ವಿಷಯದಲ್ಲೂ ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ