Chanakya Niti : ನಿಮ್ಮ ಬದುಕಿನ ಈ ಗುಟ್ಟುಗಳು ರಟ್ಟಾಗದಿರಲಿ ಜೋಕೆ
ಪ್ರತಿಯೊಬ್ಬರ ಬದುಕಿನಲ್ಲಿ ಕೆಲವು ವೈಯುಕ್ತಿಕ ಹಾಗೂ ಯಾರ ಬಳಿಯೂ ಹಂಚಿಕೊಳ್ಳದ ವಿಷಯಗಳಿರುತ್ತದೆ. ಆದರೆ ಕೆಲವೊಮ್ಮೆ ಈ ಕೆಲವು ವಿಷಯಗಳನ್ನು ತಮ್ಮ ಆತ್ಮೀಯರ ಬಳಿ ಹಂಚಿಕೊಳ್ಳುತ್ತೇವೆ. ಚಾಣಕ್ಯನು ಯಾವುದೇ ವ್ಯಕ್ತಿಯೂ ಈ ಕೆಲವು ವಿಚಾರಗಳ ಬಗ್ಗೆ ಅಪ್ಪಿ ತಪ್ಪಿಯೂ ಯಾರ ಬಳಿಯೂ ಬಾಯಿ ಬಿಡಬಾರದು ಎನ್ನುತ್ತಾನೆ. ಹಾಗಾದ್ರೆ ಜೀವನದಲ್ಲಿ ಗುಟ್ಟಾಗಿ ಇಟ್ಟುಕೊಳ್ಳಬೇಕಾದ ಆ ವಿಷಯಗಳೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿಯೂ ಸಿಗಬೇಕಾದರೆ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ಕೆಲವೊಮ್ಮೆ ನಾವು ಆತ್ಮೀಯರ ಬಳಿ ಹೇಳಿಕೊಳ್ಳುವ ಸಂಗತಿಗಳಿಂದಲೇ ಜೀವನದಲ್ಲಿ ಖುಷಿ ಹಾಗೂ ಸಂತೋಷವು ದೂರವಾಗುತ್ತದೆ. ಹೀಗಾಗಿ ಜೀವನದಲ್ಲಿ ಈ ಕೆಲವು ರಹಸ್ಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು ಎನ್ನುವುದು ಚಾಣಕ್ಯನ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಹಣವು ಒಮ್ಮೆ ಬರುತ್ತದೆ ಮತ್ತೊಮ್ಮೆ ಹೋಗುತ್ತದೆ. ಆದರೆ ಈ ಹಣದ ನಷ್ಟದ ಆಗಿರುವ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬಾರದಂತೆ. ನಷ್ಟವಾದಾಗ ಅದನ್ನ ತಮ್ಮ ಆತ್ಮೀಯ ವ್ಯಕ್ತಿಗಳೊಂದಿಗೆ ಹೇಳಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರು ನಿಮ್ಮಿಂದ ದೂರಾಗಬಹುದು. ಆರ್ಥಿಕ ಸ್ಥಿತಿಯೂ ಸರಿಯಿಲ್ಲವೆಂದಾಗ ಯಾರು ಕೂಡ ಸಹಾಯ ಮಾಡಲು ಬರುವುದಿಲ್ಲವಂತೆ. ಹೀಗಾಗಿ ಸಾಧ್ಯವಾದಷ್ಟು ಹಣದ ವಿಚಾರದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಿ ಎನ್ನುತ್ತಾನೆ ಚಾಣಕ್ಯ.
ಒಬ್ಬ ವ್ಯಕ್ತಿಯು ಯಾವುದೇ ರೀತಿಯ ದುಃಖವನ್ನು ಬೇರೆಯವರ ಜೊತೆ ಹಂಚಿಕೊಳ್ಳಬಾರದು. ಅದಲ್ಲದೇ ತಮ್ಮ ವೈಯಕ್ತಿಕ ಸಂಗತಿಗಳ ಬಗ್ಗೆ ಯಾರೊಂದಿಗೂ ಬಾಯಿ ಬಿಡಬಾರದು ಎನ್ನುತ್ತಾನೆ ಚಾಣಕ್ಯ. ಒಂದು ವೇಳೆ ನೀವು ಯಾರ ಮುಂದೆಯಾದರೂ ಹೇಳಿದರೆ ಪ್ರಾರಂಭದಲ್ಲಿ ಕೇಳಿಸಿಕೊಳ್ಳಬಹುದು. ನಂತರದಲ್ಲಿ ನಿಮ್ಮ ಬೆನ್ನ ಹಿಂದೆಯೇ ಆಡಿಕೊಂಡು ನಗಬಹುದು.
ಯಾವುದೇ ವ್ಯಕ್ತಿಯೂ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿದರೆ ಗೌರವ ಕಡಿಮೆಯಾಗುವಂತೆ ಮಾಡಿದರೆ ಅದರ ಬಗ್ಗೆ ತಲೆಗೆ ಹಚ್ಚಿಕೊಳ್ಳಬೇಡಿ. ಈ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದು, ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದು ಸರಿಯಲ್ಲ. ಇದರಿಂದ ನಿಮ್ಮ ನೆಮ್ಮದಿಯೂ ಕಡಿಮೆಯಾಗುವುದಲ್ಲದೆ, ಆತ್ಮೀಯರೊಂದಿಗೂ ಹಂಚಿಕೊಂಡರೆ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ.
ಮನೆಯ ಮಹಿಳೆಯರ ನಡವಳಿಕೆಗಳು ಹಾಗೂ ಆರೋಗ್ಯದ ಬಗ್ಗೆ ಬಾಯಿ ಬಿಡುವುದು ಒಳ್ಳೆಯದಲ್ಲ ಎನ್ನುವುದು ಚಾಣಕ್ಯನ ನೀತಿಯಲ್ಲಿದೆ. ಮನೆಯ ಪ್ರಮುಖ ವಿಷಯಗಳು, ಮಹಿಳೆಯರ ಆರೋಗ್ಯ ಸ್ಥಿತಿ ಹಾಗೂ ಕುಟುಂಬದ ವೈಯುಕ್ತಿಕ ವಿಚಾರಗಳನ್ನು ರಹಸ್ಯವಾಗಿಟ್ಟುಕೊಳ್ಳುವುದು ಬಹುಮುಖ್ಯ. ಇದರಿಂದ ಮುಂಬರುವ ದಿನಗಳಲ್ಲಿ ಎದುರಾಗುವ ಅದೆಷ್ಟೋ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಂತೆ.
ಜೀವನದಲ್ಲಿ ಎಲ್ಲರೂ ಕೂಡ ತಪ್ಪನ್ನು ಮಾಡುತ್ತಾರೆ. ಅದನ್ನು ತಿದ್ದಿ ನಡೆಯುವುದು ಮುಖ್ಯ. ಆದರೆ ನೀವು ಮಾಡಿದ ತಪ್ಪುಗಳ ಬಗ್ಗೆ ಯಾರಿಗೂ ಹೇಳುವುದು ಸರಿಯಲ್ಲವಂತೆ. ಈ ತಪ್ಪುಗಳು ಇತರರ ಕಿವಿಗೆ ಬಿದ್ದರೆ ಇದರಿಂದ ನಿಮಗೆ ಭವಿಷ್ಯದಲ್ಲಿ ತೊಂದರೆಯಾಗಬಹುದು. ಸಾಧ್ಯದಷ್ಟು ಇಂತಹ ಸೂಕ್ಷ್ಮ ವಿಷಯಗಳನ್ನು ಹಂಚಿಕೊಳ್ಳದೇ ಇರುವುದು ಉತ್ತಮ ಎನ್ನುತ್ತಾನೆ ಚಾಣಕ್ಯ.