Side Effects Of Pickle: ಉಪ್ಪಿನಕಾಯಿ ತಿನ್ನುವ ಅಭ್ಯಾಸ ನಿಮಗಿದೆಯೇ? ಈ ಅಭ್ಯಾಸ ಆರೋಗ್ಯ ಕೆಡಿಸಬಹುದು ಎಚ್ಚರ

| Updated By: ಅಕ್ಷತಾ ವರ್ಕಾಡಿ

Updated on: Oct 07, 2023 | 6:24 AM

ಉಪ್ಪಿನಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಕೆಲವೊಬ್ಬರಿಗೆ ಪ್ರತಿನಿತ್ಯ ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಇದು ತಿನ್ನಲು ತುಂಬಾ ರುಚಿಕರವಾಗಿರಬಹುದು ಆದರೆ ಉಪ್ಪಿನಕಾಯಿಯ ಅತಿಯಾದ ಸೇವನೆಯು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.

Side Effects Of Pickle: ಉಪ್ಪಿನಕಾಯಿ ತಿನ್ನುವ ಅಭ್ಯಾಸ ನಿಮಗಿದೆಯೇ? ಈ ಅಭ್ಯಾಸ  ಆರೋಗ್ಯ ಕೆಡಿಸಬಹುದು ಎಚ್ಚರ
Pickles
Image Credit source: Pinterest
Follow us on

ಉಪ್ಪಿನಕಾಯಿ ತಿನ್ನಲು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕೆಲವೊಬ್ಬರಿಗೆ ಪ್ರತಿನಿತ್ಯ ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಊಟದೊಂದಿಗೆ ಉಪ್ಪಿನಕಾಯಿ ಬೆರೆಸಿ ತಿನ್ನುವುದರಿಂದ ಊಟದ ರುಚಿ ದ್ವಿಗುಣಗೊಳ್ಳುತ್ತದೆ. ತಿನ್ನಲು ಬಲು ರುಚಿಯಾಗಿರುವ ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅದು ಹಾನಿಯುಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಅತಿಯಾಗಿ ಉಪ್ಪಿನಕಾಯಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಉಪ್ಪಿನಕಾಯಿ ದೀರ್ಘಕಾಲದವರೆಗೆ ಕೆಡದಂತೆ ಇರಲು ಅದಕ್ಕೆ ಸಾಕಷ್ಟು ಪ್ರಮಾಣದ ಉಪ್ಪು, ಮೆಣಸು ಸೇರಿದಂತೆ ಇತರೆ ಕಟು ಮಸಾಲೆ ಹಾಗೂ ಅಧಿಕ ಪ್ರಮಾಣದಲ್ಲಿ ಎಣ್ಣೆಯನ್ನು ಸೇರಿಸಲಾಗಿರುತ್ತದೆ. . ಈ ಕಾರಣದಿಂದ ಅತಿಯಾದ ಉಪ್ಪಿನಕಾಯಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಅಸಿಡಿಟಿ, ಕೊಲೆಸ್ಟ್ರಾಲ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಉಪ್ಪಿನಕಾಯಿಯನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ತಿನ್ನುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಅತಿಯಾಗಿ ಉಪ್ಪಿನಕಾಯಿಯನ್ನು ಸೇವನೆ ಮಾಡುವುದರಿಂದ ಬಾಧಿಸುವ ಆರೋಗ್ಯ ಸಮಸ್ಯೆಗಳೆಂದರೆ:

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು:

ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುತ್ತದೆ. ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಅದನ್ನು ಸಂಗ್ರಹಿಸಿಡಲು ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ಬಳಸಲಾಗುತ್ತದೆ. ಹಾಗಿರುವಾಗ ನೀವು ಅತಿಯಾಗಿ ಉಪ್ಪಿನಕಾಯಿಯನ್ನು ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಸಮಸ್ಯೆಯೂ ಹೆಚ್ಚಾಗುತ್ತದೆ.

ಅಧಿಕ ರಕ್ತದೊತ್ತಡದ ಸಮಸ್ಯೆ:

ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಪ್ಪಿನಕಾಯಿ ವಿಷವಿದ್ದಂತೆ. ಏಕೆಂದರೆ ಉಪ್ಪಿನಕಾಯಿಯಲ್ಲಿರುವ ಅತಿಯಾದ ಉಪ್ಪು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುವ ಸಾಧ್ಯತೆಯಿರುತ್ತದೆ. ಉಪ್ಪಿನಕಾಯಿಯಲ್ಲಿರುವ ಸೋಡಿಯಂ ಪ್ರಮಾಣವವು ರಕ್ತದೊತ್ತಡವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ರಕ್ತನಾಳಗಳಿಗೆ ಹಾನಿಯುಂಟುಮಾಡುತ್ತವೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಗ್ರೀನ್ ಟೀ ಅಷ್ಟೇ ಅಲ್ಲ, ಗ್ರೀನ್ ಕಾಫಿ ಬಗ್ಗೆ ನಿಮಗೆಷ್ಟು ಗೊತ್ತು?

ದೇಹದಲ್ಲಿ ಊತ:

ಹೆಚ್ಚು ಉಪ್ಪಿನಕಾಯಿ ತಿನ್ನುವುದರಿಂದ ದೇಹದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಏಕೆಂದರೆ ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಇರಲು ಹಲವು ಸಂರಕ್ಷಕಗಳನ್ನು ಬಳಸಲಾಗುತ್ತದೆ. ಇದು ದೇಹದಲ್ಲಿ ಊತ ಮತ್ತು ನೋವನ್ನು ಉಂಟುಮಾಡಬಹುದು.

ಮೂಳೆಗಳನ್ನು ದುರ್ಬಲಗೊಳಿಸುತ್ತದೆ:

ಉಪ್ಪಿನಕಾಯಿಯಲ್ಲಿರುವ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶದ ಕಾರಣದಿಂದಾಗಿ ದೇಹವು ಕ್ಯಾಲ್ಸಿಯಂನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಉಪ್ಪಿನಕಾಯಿಯ ಅತಿಯಾದ ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಇದು ಸಂಧಿವಾತ ಮತ್ತು ಕೀಲುನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಗ್ಯಾಸ್ ಮತ್ತು ಅಸಿಡಿಟಿಗೆ ಕಾರಣವಾಗಬಹುದು:

ಉಪ್ಪಿನಕಾಯಿಯು ಕೆಡದಂತೆ ಹಾಗೂ ಅದನ್ನು ಮಸಾಲೆಯುಕ್ತವನ್ನಾಗಿ ಮಾಡಲು ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಟು ಮಸಾಲೆಗಳನ್ನು ಹಾಕಲಾಗುತ್ತದೆ. ಈ ಕಾರಣದಿಂದಾಗಿ ಉಪ್ಪಿನಕಾಯಿಯನ್ನು ಹೆಚ್ಚು ಸೇವನೆ ಮಾಡುವ ವ್ಯಕ್ತಿಯು ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ದೀರ್ಘಕಾಲದವರೆಗೆ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ಹೊಟ್ಟೆ ಹುಣ್ಣಿನಂತಹ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: