
ಯಾವುದೇ ದೇಶವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಅಂಶವೆಂದರೆ ಅದು ರಾಷ್ಟ್ರೀಯ ಧ್ವಜ (National Flag). ಪ್ರಪಂಚದಲ್ಲಿರುವ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ರಾಷ್ಟ್ರ ಧ್ವಜವಿದೆ. ಅದೇ ರೀತಿ ನಮ್ಮ ಭಾರತದಲ್ಲಿ ತ್ರಿವರ್ಣ ಧ್ವಜವಿದ್ದು, ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜಕ್ಕೆ ತನ್ನದೇ ಆಗಿರುವ ಮಹತ್ವ ಮತ್ತು ವಿಶೇಷತೆಗಳಿವೆ. ಅಲ್ಲದೆ ರಾಷ್ಟ್ರ ಧ್ವಜ ಏಕತೆ, ಧೈರ್ಯ, ಸತ್ಯದ ಸಂಕೇತವಾಗಿದ್ದು, ರಾಷ್ಟ್ರ ಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತವು ಈ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡ ದಿನವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು (National Flag Day) ಆಚರಿಸಲಾಗುತ್ತದೆ. ಈ ವಿಶೇಷ ದಿನವು ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಸಂಕೇತವನ್ನು ಗೌರವಿಸುವ ಮಹತ್ವವನ್ನು ಹೊಂದಿದೆ.
ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ದೇಶ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮೊದಲು, ಸಂವಿಧಾನ ಸಭೆಯು ಜುಲೈ 22, 1947 ರಂದು ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡದ್ದನ್ನು ಸ್ಮರಿಸುವ ಸಲುವಾಗಿ ನಮ್ಮ ದೇಶದಲ್ಲಿ ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ . ಮಾಹಿತಿಗಳ ಪ್ರಕಾರ, ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಸಂಕೇತವನ್ನು ಗೌರವಿಸುವ ಈ ದಿನವು ಹೆಚ್ಚಿನ ಮಹತ್ವವನ್ನು ಹೊಂದಿದೆ.
ರಾಷ್ಟ್ರೀಯ ಧ್ವಜ ದಿನವು ಕೇವಲ ಧ್ವಜವನ್ನು ಗೌರವಿಸುವ ದಿನವಲ್ಲ, ಇದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮೌಲ್ಯಗಳು ಮತ್ತು ತ್ಯಾಗಗಳನ್ನು ನಾವೆಲ್ಲರೂ ಸ್ಮರಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಶದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ನಮ್ಮ ದೇಶ ಪ್ರಗತಿ ಮತ್ತು ಏಕತೆಯ ಕಡೆಗೆ ನಡೆಯುತ್ತಿರುವ ಪ್ರಯಾಣವನ್ನು ಪ್ರತಿನಿಧಿಸುತ್ತದೆ.
” ತಿರಂಗ ” ಎಂದು ಕರೆಯಲ್ಪಡುವ ಭಾರತ ರಾಷ್ಟ್ರ ಧ್ವಜವು ಸಮಾನ ಅಗಲದ ಮೂರು ಅಡ್ಡ ಪಟ್ಟೆಗಳನ್ನು ಹೊಂದಿದೆ. ಮತ್ತು ಈ ತ್ರಿವರ್ಣ ಧವಜ 2:3 ಅನುಪಾತದಲ್ಲಿವೆ. ಈ ವಿನ್ಯಾಸವು ಆಳವಾದ ಸಂಕೇತಗಳನ್ನು ಹೊಂದಿದ್ದು, ಭಾರತೀಯ ರಾಷ್ಟ್ರದ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.
ಮೇಲಿನ ಪಟ್ಟಿ ಕೇಸರಿ, ಇದು ಧೈರ್ಯ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ಮಧ್ಯದ ಪಟ್ಟಿ ಬಿಳಿ ಬಣ್ಣದ್ದಾಗಿದ್ದು, ಇದು ಶಾಂತಿ ಮತ್ತು ಸತ್ಯವನ್ನು ಸಂಕೇತಿಸುತ್ತದೆ, ಕೆಳಗಿನ ಪಟ್ಟಿಯು ಹಸಿರು ಬಣ್ಣದ್ದಾಗಿದ್ದು, ಇದು ಸಮೃದ್ಧಿ ಮತ್ತು ಶುಭದ ಸಂಕೇತವಾಗಿದೆ. ಇನ್ನೂ ತ್ರಿವರ್ಣ ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಶ್ರೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಇದನ್ನು ಸಮಯದ ಚಕ್ರ ಎಂದೂ ಸಹ ಕರೆಯಲಾಗುತ್ತದೆ.
ಸ್ವಾತಂತ್ರ್ಯಪೂರ್ವದಿಂದ ಇಲ್ಲಿಯವರೆಗೆ ಭಾರತದ ಧ್ವಜವನ್ನು ಆರು ಬಾರಿ ಬದಲಾಯಿಸಲಾಗಿದೆ. ಇವುಗಳ ಬಗ್ಗೆ ನೋಡುವುದಾದರೆ, ಅಧಿಕೃತವಾಗಿ, ಭಾರತದ ಧ್ವಜವನ್ನು ಮೊದಲು 1906 ರಲ್ಲಿ ಕೋಲ್ಕತ್ತಾದಲ್ಲಿ ಹಾರಿಸಲಾಯಿತು. 1906 ರಲ್ಲಿ ಭಾರತಕ್ಕೆ ದೊರೆತ ಧ್ವಜವು ಇಂದಿನ ಧ್ವಜಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಆ ಧ್ವಜದಲ್ಲಿದ್ದ ಮೂರು ಬಣ್ಣಗಳು ಹಸಿರು, ಹಳದಿ ಮತ್ತು ಕೆಂಪು. ಅದರಲ್ಲಿ ಕಮಲದ ಹೂವು, ಚಂದ್ರ ಮತ್ತು ಸೂರ್ಯನ ಚಿಹ್ನೆಗಳಿತ್ತು. ಧ್ವಜದ ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು. ನಿಖರವಾಗಿ 1 ವರ್ಷದ ನಂತರ, 1907 ರಲ್ಲಿ, ಎರಡನೇ ಧ್ವಜ ಬಂತು.
ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಸಮಾನರು; ಅಂತಾರಾಷ್ಟ್ರೀಯ ನ್ಯಾಯ ದಿನದ ಇತಿಹಾಸ ತಿಳಿಯಿರಿ
ಇದರ ನಂತರ, 1917 ರಲ್ಲಿ, ಹೋಮ್ ರೂಲ್ ಚಳುವಳಿಯ ಸಂದರ್ಭದಲ್ಲಿ ಅನ್ನಿ ಬೆಸೆಂಟ್ ಲೋಕಮಾನ್ಯ ತಿಲಕ್ ಮೂರನೇ ಧ್ವಜವನ್ನು ಹಾರಿಸಿದರು, ಈ ಧ್ವಜವು ತುಂಬಾ ವಿಭಿನ್ನವಾಗಿತ್ತು. ಇದರ ನಂತರ, 1921 ರಲ್ಲಿ, ಭಾರತದ ಧ್ವಜವನ್ನು ಮತ್ತೆ ಬದಲಾಯಿಸಲಾಯಿತು, ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ, ಆಂಧ್ರಪ್ರದೇಶದ ಯುವಕನೊಬ್ಬ ಈ ಧ್ವಜವನ್ನು ತಯಾರಿಸಿ ಮಹಾತ್ಮ ಗಾಂಧಿಯವರಿಗೆ ಕೊಟ್ಟನು. ಅದು ಕೆಂಪು, ಹಸಿರು ಮತ್ತು ಬಿಳಿ ಬಣ್ಣಗಳನ್ನು ಹೊಂದಿತ್ತು. ಮತ್ತು ಮಧ್ಯದಲ್ಲಿ ಚರಕದ ಚಿಹ್ನೆಯಿತ್ತು.
ಇದಾದ ನಂತರ, 1931 ರಲ್ಲಿ ಭಾರತದ ಧ್ವಜ ಮತ್ತೊಮ್ಮೆ ಬದಲಾಯಿತು. ಈ ಧ್ವಜವು ಮೇಲ್ಭಾಗದಲ್ಲಿ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಮತ್ತು ಕೊನೆಯಲ್ಲಿ ಹಸಿರು ಪಟ್ಟಿಯನ್ನು ಹೊಂದಿತ್ತು. ಬಿಳಿ ಪಟ್ಟಿಯ ಮಧ್ಯದಲ್ಲಿ ಚರಕದ ಚಿಹ್ನೆಯಿತ್ತು. ಇದನ್ನು ಅಧೀಕೃತ ರಾಷ್ಟ್ರಧ್ವಜವನ್ನಾಗಿ ಅಳವಡಿಸಲು ನಿರ್ಣಯ ಅಂಗೀಕರಿಸಲಾಯಿತು. ಬಳಿಕ ಜುಲೈ 22, 1947 ರಂದು ತ್ರಿವರ್ಣ ಧ್ವಜದ ಮಧ್ಯದಲ್ಲಿ ಚರಕದ ಬದಲಿಗೆ ಅಶೋಕ ಚಕ್ರವನ್ನು ಅಳವಡಿಸಲಾಯಿತು. ಅಂದಿನಿಂದ ರಾಷ್ಟ್ರಧ್ವಜದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಧ್ವಜವನ್ನು ಪಿಂಗಲಿ ವೆಂಕಯ್ಯ ಅವರು ರಚಿಸಿದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ