World Population Day 2025: ಜನಸಂಖ್ಯಾ ದಿನವನ್ನು ಆಚರಿಸುವುದೇಕೇ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಜನಸಂಖ್ಯೆಯಿಂದ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು? ಅದರ ಹಿನ್ನೆಲೆಯೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವಿಶ್ವದ ಜನಸಂಖ್ಯೆ (Population Explosion) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಸ್ಥಿರವಾಗಿ ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ, ದೇಶದ ಪ್ರಗತಿಗೆ ಅವಕಾಶವಿದ್ದರೂ ಇದು ವಸತಿ, ಆರೋಗ್ಯ, ಮೂಲ ಸೌಕರ್ಯ , ಪರಿಸರ, ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ಜನಸಂಖ್ಯೆ ಹೆಚ್ಚಳದಿಂದ ಉದ್ಯೋಗಾವಕಾಶಗಳ ಕೊರತೆ ಉಂಟಾದರೆ ಅದರಿಂದ ಬಡತನ, ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗುತ್ತದೆ. ಹೀಗೆ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು (World Population Day) ಆಚರಿಸಲಾಗುತ್ತದೆ.
ವಿಶ್ವ ಜನಸಂಖ್ಯಾ ದಿನದ ಇತಿಹಾಸ?
ವಿಶ್ವ ಜನಸಂಖ್ಯಾ ದಿನವನ್ನು 1989 ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಪ್ರಾರಂಭಿಸಿತು. 1987 ರ ಹೊತ್ತಿಗೆ, ವಿಶ್ವದ ಜನಸಂಖ್ಯೆಯು ಐದು ಶತಕೋಟಿಯ ಹತ್ತಿರ ತಲುಪಿತ್ತು, ಇದರಿಂದಾಗಿ ಅನೇಕ ದೇಶಗಳು ಮುಂದೆ ಏನು ಎಂದು ಚಿಂತಿಸಲು ಪ್ರಾರಂಭಿಸಿದವು. ಆ ಸಂದರ್ಭದಲ್ಲಿ ಡಾ. ಕೆ.ಸಿ. ಜಕಾರಿಯಾ ಈ ದಿನವನ್ನು ಆಚರಿಸಲು ಸಲಹೆ ನೀಡಿದರು. ಬಡತನ, ತಾಯಿಯ ಆರೋಗ್ಯ, ಆರ್ಥಿಕ ತೊಂದರೆಗಳು ಮತ್ತು ಇತರ ಹಲವು ತೊಂದರೆಗಳು ಸೇರಿದಂತೆ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳು ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಅಂದಿನಿಂದ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.
ಜನ ಸಂಖ್ಯಾ ದಿನದ ಥೀಮ್:
2025 ರ ಥೀಮ್: “ನ್ಯಾಯಯುತ ಮತ್ತು ಆಶಾದಾಯಕ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಅವರನ್ನು ಸಬಲೀಕರಣಗೊಳಿಸುವುದು” (Empowering young people to create the families they want in a fair and hopeful world)
ಈ ಥೀಮ್ ಕುಟುಂಬ ಯೋಜನೆಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಯುವಜನರಿಗೆ ಅಗತ್ಯವಿರುವ ಪರಿಕರಗಳು, ಮಾಹಿತಿ ನೀಡುವುದರ ಮೇಲೆ ಕೇಂದ್ರೀಕರಿಸಲಾಗಿದೆ.
ವಿಶ್ವ ಜನಸಂಖ್ಯಾ ದಿನದ ಮಹತ್ವ:
ವಿಶ್ವ ಜನಸಂಖ್ಯಾ ದಿನವು ಜನಸಂಖ್ಯೆಯ ಹೆಚ್ಚಳವು ಪರಿಸರ, ಆರ್ಥಿಕತೆ ಮತ್ತು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೆನಪಿಸುತ್ತದೆ. ಇದರ ಮಹತ್ವವು ಈ ಕೆಳಗಿನವುಗಳನ್ನು ಒಳಗೊಂಡಿದೆ:
- ಹವಾಮಾನ, ಆಹಾರ ಪೂರೈಕೆ, ಜಲ ಸಂಪನ್ಮೂಲಗಳು, ವಸತಿ ಮತ್ತು ಮೂಲಸೌಕರ್ಯಗಳ ಮೇಲೆ ಅಧಿಕ ಜನಸಂಖ್ಯೆಯ ಪರಿಣಾಮವನ್ನು ಎತ್ತಿ ತೋರಿಸುವುದು.
- ಕುಟುಂಬ ಯೋಜನೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಉತ್ತೇಜಿಸುವುದು.
- ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಲಿಂಗ ಸಮಾನತೆಯನ್ನು ಬೆಂಬಲಿಸುವುದು.
- ಸುಸ್ಥಿರ ಅಭಿವೃದ್ಧಿ ಮತ್ತು ಸುಧಾರಿತ ನಗರ ಯೋಜನೆಯನ್ನು ಪ್ರೋತ್ಸಾಹಿಸುವುದು.
- ಜವಾಬ್ದಾರಿಯುತ ಜನಸಂಖ್ಯಾ ನೀತಿಗಳು ಮತ್ತು ಸಾಮಾಜಿಕ ಕಲ್ಯಾಣ ಸುಧಾರಣೆಗಳನ್ನು ಪರಿಚಯಿಸಲು ಸರ್ಕಾರಗಳನ್ನು ಪ್ರೇರೇಪಿಸುವುದು.
ಭಾರತಕ್ಕೆ ವಿಶ್ವ ಜನಸಂಖ್ಯಾ ದಿನ ಏಕೆ ಮುಖ್ಯ?
ಭಾರತವು ಈಗ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವುದರಿಂದ, ಈ ದಿನದ ಆಚರಣೆ ನಿರ್ಣಾಯಕವಾಗಿದೆ. ಜನಸಂಖ್ಯೆಯ ಸಮಸ್ಯೆಯು ನಿರುದ್ಯೋಗ, ಮೂಲ ಸೌಕರ್ಯದ ಕೊರತೆ, ಆರೋಗ್ಯ ಅಸಮಾನತೆಗಳು ಮತ್ತು ಸಂಪನ್ಮೂಲ ಸವಕಳಿಯಂತಹ ಅಸ್ತಿತ್ವದಲ್ಲಿರುವ ಸವಾಲುಗಳನ್ನು ತೀವ್ರಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುವುದರಿಂದ ಸ್ಥಿರ ಮತ್ತು ಸಮಾನ ಸಮಾಜವನ್ನು ನಿರ್ಮಿಸಲು ನೀತಿ ಸುಧಾರಣೆ ಮತ್ತು ಜನರಲ್ಲಿ ಜಾಗೃತಿಯನ್ನು ಮೂಡಿಸಬಹುದು.
ಇದನ್ನೂ ಓದಿ: ಚಾಕೊಲೇಟ್ ಪ್ರಿಯರೇ… ವಿಶ್ವ ಚಾಕೊಲೇಟ್ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?
ವಿಶ್ವ ಜನಸಂಖ್ಯಾ ದಿನ: ಟಾಪ್ 10 ದೇಶಗಳು:
- ಭಾರತ – 1.46 ಬಿಲಿಯನ್
- ಚೀನಾ – 1.42 ಬಿಲಿಯನ್
- ಯುನೈಟೆಡ್ ಸ್ಟೇಟ್ಸ್ (ಅಮೆರಿಕ)- 347 ಮಿಲಿಯನ್
- ಇಂಡೋನೇಷ್ಯಾ – 286 ಮಿಲಿಯನ್
- ಪಾಕಿಸ್ತಾನ – 255 ಮಿಲಿಯನ್
- ನೈಜೀರಿಯಾ – 238 ಮಿಲಿಯನ್
- ಬ್ರೆಜಿಲ್ – 213 ಮಿಲಿಯನ್
- ಬಾಂಗ್ಲಾದೇಶ – 176 ಮಿಲಿಯನ್
- ರಷ್ಯಾ – 144 ಮಿಲಿಯನ್
- ಇಥಿಯೋಪಿಯಾ – 135 ಮಿಲಿಯನ್
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Thu, 10 July 25








