World Youth Skills Day 2025: ಯುವಕರು ದೇಶದ ಭವಿಷ್ಯ; ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯಿರಿ
ಯುವಕರಿಗೆ ಉದ್ಯೋಗ, ಉದ್ಯಮಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕೌಶಲ್ಯಗಳನ್ನು ನೀಡುವ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಯುವಕರನ್ನು ಪ್ರೇರೇಪಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆಯನ್ನು ತಿಳಿಯೋಣ ಬನ್ನಿ.

ಯುವ ಶಕ್ತಿ (Youth) ದೇಶದ ಸಮೃದ್ಧಿಯ ಸಂಕೇತ. ಯಾವುದೇ ದೇಶದ ಭವಿಷ್ಯ ಎನ್ನುವಂತಹದ್ದು ಯುವಶಕ್ತಿಯ ಮೇಲೆಯೇ ನಿಂತಿದೆ. ಯುವ ಜನತೆಯ ಸದ್ಬಳಕೆಯಿಂದ ಸದೃಢ, ಶಕ್ತಿಶಾಲಿ, ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಒಟ್ಟಿನಲ್ಲಿ ಯುವಕರನ್ನು ರಾಷ್ಟ್ರದ ಸಂಪತ್ತು ಎಂದರೆ ತಪ್ಪಾಗಲಾದು. ಹೀಗೆ ದೇಶದ ಅಭಿವೃದ್ಧಿಯಲ್ಲಿ ಯುವ ಜನತೆ ಅತಿದೊಡ್ಡ ಭಾಗವಹಿಸುವಿಕೆಯನ್ನು ಹೊಂದಿದ್ದರೂ, ಯುವಕರಲ್ಲಿ ಒಂದಷ್ಟು ಕೌಶಲ್ಯದ ಕೊರತೆಯೂ ಕಾಣುತ್ತಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಕೆಲಸ, ಉದ್ಯಮಶೀಲತೆ, ವ್ಯವಹಾರಕ್ಕೆ ಸಂಬಂಧಿಸಿದ ಅಗತ್ಯವಾದ ಕೌಶಲ್ಯವನ್ನು ಒದಗಿಸಲು ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಯುವಕರನ್ನು ಪ್ರೇರೇಪಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ (World Youth Skills Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ:
2014 ರಲ್ಲಿ, ಶ್ರೀಲಂಕಾವು ಯುವಕರಿಗೆ ಉದ್ಯೋಗಕ್ಕೆ ಬೇಕಾದ ಅಗತ್ಯವಾದ ತರಬೇತಿಯನ್ನು ನೀಡಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮುಂದೆ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲು ಪ್ರಸ್ತಾಪಿಸಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 18, 2014 ರಂದು ಇದಕ್ಕೆ ಅನುಮೋದನೆಯನ್ನು ನೀಡಿತು ಮತ್ತು ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ, ಈ ದಿನವನ್ನು ಪ್ರತಿ ವರ್ಷ ಜುಲೈ 15 ರಂದು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನವನ್ನು ಏಕೆ ಆಚರಿಸಲಾಗುತ್ತದೆ?
ಈ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಜೀವನ ವಿಧಾನ, ಆಹಾರ, ಉಡುಗೆ ತೊಡುಗೆಗಳು ಮಾತ್ರವಲ್ಲದೆ, ಕೆಲಸ ಮಾಡುವ ವಿಧಾನದಲ್ಲೂ ಹಲವು ಬದಲಾವಣೆಗಳಾಗಿವೆ. ಮೊದಲು, ಕೆಲಸಕ್ಕೆ ಅನುಭವ ಮುಖ್ಯವಾಗಿತ್ತು, ಆದರೆ ಈಗ ಅನುಭವಕ್ಕಿಂತ ಕೌಶಲ್ಯಗಳು ಮುಖ್ಯ. ಕೌಶಲ್ಯಗಳಿದ್ದರೆ ಮಾತ್ರ ವೃತ್ತಿಪರ ಜೀವನದಲ್ಲಿ ತ್ವರಿತವಾಗಿ ಯಶಸ್ಸನ್ನು ಸಾಧಿಸಬಹುದು. ಹಾಗಾಗಿ ಯುವಕರಿಗೆ ಉದ್ಯೋಗ ಕೌಶಲ್ಯಗಳು ಹಾಗೂ ಅದರ ಮಹತ್ವಗಳ ಬಗ್ಗೆ ತಿಳಿಸಲು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ವಿಶ್ವ ಯುವ ಕೌಶಲ್ಯ ದಿನದ ಮೂಲಕ, ಯುವಕರನ್ನು ಉದ್ಯೋಗಾವಕಾಶಗಳಿಗೆ ಸಿದ್ಧಪಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಇದರಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
ಇದನ್ನೂ ಓದಿ: ಜನಸಂಖ್ಯಾ ದಿನವನ್ನು ಆಚರಿಸುವುದೇಕೇ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಯುವ ಕೌಶಲ್ಯ ದಿನದ ಮಹತ್ವ:
ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಯುವಕರಿಗಿದೆ. ಅಂತಹ ಪರಿಸ್ಥಿತಿಯಲ್ಲಿ, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಯುವಜನರು ಯಶಸ್ವಿಯಾಗಲು ಸರಿಯಾದ ಕೌಶಲ್ಯಗಳನ್ನು ಹೊಂದಿರುವುದು ಅತ್ಯಗತ್ಯ. ಯುವಕರು ಸೂಕ್ತ ಕೌಶಲ್ಯಗಳೊಂದಿಗೆ ದೇಶದ ಆರ್ಥಿಕತೆಗೆ ಕೊಡುಗೆ ನೀಡಬಹುದು. ಸಾಮಾಜಿಕ ಬದಲಾವಣೆಯನ್ನು ತರಬಹುದು. ಹೀಗಿರುವಾಗ ವಿಶ್ವ ಯುವ ಕೌಶಲ್ಯ ದಿನವು ಯುವಕರನ್ನು ಸಬಲೀಕರಣಗೊಳಿಸಲು ಮತ್ತು ಅವರಿಗೆ ಉತ್ತಮ ಭವಿಷ್ಯವನ್ನು ನೀಡಲು ಅಗತ್ಯವಾದ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸಲು ಒಂದು ಪ್ರಮುಖ ಅವಕಾಶವಾಗಿದೆ. ವಿಶ್ವ ಯುವ ಕೌಶಲ್ಯ ದಿನವು ಯುವಕರ ಸಾಮರ್ಥ್ಯವನ್ನು ಗುರುತಿಸಲು ಸಹಾಯಕವಾಗಿದೆ. ಜೊತೆಗೆ ಈ ದಿಮ ಕೌಶಲ್ಯಗಳನ್ನು ಪಡೆದುಕೊಳ್ಳುವುದರಿಂದ ಯುವಜನರಿಗೆ ಅವಕಾಶಗಳು ಹೇಗೆ ತೆರೆದುಕೊಳ್ಳುತ್ತವೆ, ಉತ್ತಮ ಉದ್ಯೋಗಾವಕಾಶಗಳು ಎತ್ತಿ ತೋರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








